ಕೊಡಗು: ಸರ್ಕಾರ ನಡೆಸಲು ಗಂಡಸ್ತನ ಬೇಕಿಲ್ಲ. ಗಂಡಸ್ತನ ಯಾವ ಜಾಗದಲ್ಲಿ ಬಳಕೆ ಮಾಡಬೇಕು ಎಂಬುದನ್ನು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ಗೊತ್ತಿರಬೇಕು. ಒಂದು ಸರ್ಕಾರವನ್ನು ನಡೆಸಲು ಏನು ಬೇಕೋ ಅದೆಲ್ಲವೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಕೊಡಗಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲಾಲ್ ಧರ್ಮದ ಆಚರಣೆ. ಹಲಾಲ್ ಮಾಂಸ ಮಾರಾಟ ಮಾಡುವುದನ್ನು ಸರ್ಕಾರ ಹೇಳಿಲ್ಲ ಅಥವಾ ಅದರ ನಿಷೇಧವನ್ನೂ ಮಾಡಿಲ್ಲ. ಯಾವುದೇ ಸಂಘ-ಸಂಸ್ಥೆಗಳು ಹಲಾಲ್ ಮಾಡುತ್ತಿರುವ ಅಂಗಡಿ ಮುಂದೆ ಹೋಗಿ ಪ್ರತಿಭಟನೆ ಮಾಡಿಲ್ಲ. ಆದ್ದರಿಂದ ಹಲಾಲ್ಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಠ್ಯದಲ್ಲಿ ಟಿಪ್ಪು ವಿಷಯ ತೆಗೆದಿಲ್ಲ: ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಮಾಹಿತಿಯನ್ನು ಕೈಬಿಟ್ಟಿಲ್ಲ. ಬದಲಾಗಿ ಶಾಸಕ ಅಪ್ಪಚ್ಚು ರಂಜನ್ ಅವರು ಹಲವಾರು ದಾಖಲೆ, ಸಾಕ್ಷ್ಯಗಳನ್ನು ಟಿಪ್ಪು ವಿರುದ್ಧ ನೀಡಿದ್ದಾರೆ. ಆ ಮಾಹಿತಿಯನ್ನು ಬ್ರಿಟಿಷ್ ಲೈಬ್ರರಿಯಿಂದ ಸಂಗ್ರಹಿಸಿದ್ದಾರೆ. ದಾಖಲೆಗಳನ್ನು ಪರಿಷ್ಕರಣ ಸಮಿತಿಗೆ ನೀಡಲಾಗಿದೆ. ಟಿಪ್ಪುವಿನ ಮತ್ತೊಂದು ಮುಖವನ್ನೂ ತೋರಿಸಿ ಎಂದು ರಂಜನ್ ಕೇಳಿಕೊಂಡಿದ್ದಾರೆ. ಮುಂದಿನ ವರ್ಷದ ಪಠ್ಯಕ್ರಮದ ವೇಳೆ ಇದನ್ನು ಗಮನಕ್ಕೆ ತೆಗೆದುಕೊಳ್ಳುತ್ತೇವೆ. ಖುದ್ದು ಟಿಪ್ಪು ಬರೆದ ಪತ್ರ ಹಾಗೂ ಬ್ರಿಟಿಷರ ದಾಖಲೆಯನ್ನು ಪರಿಗಣಿಸುತ್ತೇವೆ ಎಂದು ಸಚಿವರು ತಿಳಿಸಿದರು.