ಕೊಡಗು : ಯುವತಿಯ ಹೆಸರಲ್ಲಿ ನಕಲಿ ಪ್ರೊಪೈಲ್ ಕ್ರಿಯೇಟ್ ಮಾಡಿ ಫೇಸ್ಬುಕ್ನಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು ನಂಬರ್ ಪಡೆದು ವಾಟ್ಸ್ಆ್ಯಪ್ನಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡುತಿದ್ದ ಯುವಕನನ್ನು ಥಳಿಸಿ, ಪೊಲೀಸರ ವಶಕ್ಕೆ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಹಾಕತ್ತೂರಿನ ಅಶ್ರಫ್ ಎಂಬ ಯುವಕ ಕಳೆದ 15 ದಿನಗಳಿಂದ ರಶ್ಮಿ ಎಂಬ ಯುವತಿಯ ಹೆಸರಿನ ಮೂಲಕ ಮಹಿಳೆಯೊಬ್ಬರಿಗೆ ಫೇಸ್ ಬುಕ್ನಲ್ಲಿ ಫ್ರೆಂಡ್ ಆಗಿದ್ದ. ಮಹಿಳೆ ಎನ್ನುವ ಕಾರಣಕ್ಕೆ ಸಂತ್ರಸ್ತೆ ತನ್ನ ವಾಟ್ಸ್ಆ್ಯಪ್ ನಂಬರ್ ನೀಡಿದ್ದರು. ಇದಾದ ಕೆಲ ದಿನಗಳ ಬಳಿಕ ಆರೋಪಿ ಅಶ್ರಫ್ ಮಹಿಳೆಯೊಂದಿಗೆ ಅಶ್ಲೀಲವಾಗಿ ಚಾಟಿಂಗ್ ಮಾಡಿದ್ದಾನೆ.
ಈ ರೀತಿ ಚಾಟಿಂಗ್ ಮಾಡಬಾರದೆಂದು ಮಹಿಳೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಕಾಮುಕ ತನ್ನ ಕೃತ್ಯ ಮುಂದುವರಿಸಿದ್ದ. ಅಷ್ಟೇ ಅಲ್ಲ, ತನ್ನ ಇತರ ಸ್ನೇಹಿತರಿಗೂ ಸಂತ್ರಸ್ತೆಯ ನಂಬರ್ ನೀಡಿದ್ದ. ಹೇಗಾದರೂ ಮಾಡಿ ಕಿಡಿಗೇಡಿ ಅಶ್ರಫ್ನನ್ನು ಹಿಡಿಯಬೇಕೆಂದು ಪರಿಚಯಸ್ಥರಿಗೆ ಮಹಿಳೆ ವಿಷಯ ತಿಳಿಸಿದ್ದರು. ಯೋಜನೆಯಂತೆ ಸೋಮವಾರ ಆತನನ್ನು ಚಾಟಿಂಗ್ ಮೂಲಕವೇ ಉಪಾಯವಾಗಿ ಮಡಿಕೇರಿಗೆ ಕರೆಸಿಕೊಳ್ಳಲಾಗಿತ್ತು.
ಈ ವೇಳೆ ರೆಡ್ ಹ್ಯಾಂಡ್ ಆಗಿ ಅಶ್ರಫ್ನನ್ನು ಸೆರೆ ಹಿಡಿದ್ದಿದ್ದಾರೆ. ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆರೋಪಿಯನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ತನ್ನ ಜೊತೆ ಇನ್ನೂ ಇಬ್ಬರು ಇರುವುದಾಗಿ ಆರೋಪಿ ಮಾಹಿತಿ ನೀಡಿದ್ದು, ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಮಡಿಕೇರಿ ಸೈಬರ್ ಕ್ರೈಮ್ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.