ಕೊಡಗು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಲವಾರು ಜಲಪಾತಗಳಿಗೆ ಜೀವ ಕಳೆ ಬಂದಿದೆ. ಮಡಿಕೇರಿಯ ಅಬ್ಬಿ ಜಲಪಾತ ತನ್ನ ಬೋರ್ಗರೆತದಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದು, ಈ ಜಲಧಾರೆಯ ಸೊಬಗನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಬ್ಬಿ ಜಲಪಾತದ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಕೊಡಗಿನಲ್ಲಿ ಮಳೆ ಸುರಿಯಲು ಆರಂಭಿಸಿದ್ರೆ ಕೆಲ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಕೊಡಗಿನ ಜಲಪಾತ ಸವಿಯಲು ಮಳೆಗಾಲ ಪ್ರಸಕ್ತ ಸಮಯವಾಗಿದ್ದು, ಜಿಟಿ ಜಿಟಿ ಮಳೆಯಲ್ಲಿ ಮನಸಿಗೆ ಮುದನೀಡುವ ಪರಿಸರ ಪ್ರವಾಸಿಗರನ್ನ ಮಂತ್ರ ಮುಗ್ಧರನ್ನಾಗಿಸುತ್ತದೆ.
ಇದನ್ನೂ ಓದಿ: ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಅಬ್ಬಿ ಫಾಲ್ಸ್ ವೈಭವ... ಹಾಲ್ನೊರೆಯ ಸವಿಗೆ ಮನಸೋತ ಪ್ರವಾಸಿಗರು!
ಮಡಿಕೇರಿಯಿಂದ ಅನತಿ ದೂರದಲ್ಲಿರುವ ಈ ಅಬ್ಬಿ ಜಲಪಾತವನ್ನು ನೋಡುವುದೇ ಚಂದ. ಇದನ್ನು ನೋಡಲು ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಸಹ ಪ್ರವಾಸಿಗರು ಬರುತ್ತಿದ್ದು, ಜಲಪಾತ ಹಾಗೂ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.
ಅಬ್ಬಿ ಜಲಪಾತದ ವಿಶೇಷವೆಂದರೆ, ವಾಹನದಿಂದ ಇಳಿದು ಸುಮಾರು ಅರ್ಧ ಕಿ.ಮೀಟರ್ ದೂರ ನಡೆದುಕೊಂಡು ಸಾಗಬೇಕು. ಇದು ಪ್ರವಾಸಿಗರಿಗೆ ಮತ್ತಷ್ಟು ಮಜಾ ನೀಡುತ್ತದೆ. ದೊಡ್ಡವರಿಂದ ಹಿಡಿದು ಪುಟ್ಟ ಪುಟ್ಟ ಮಕ್ಕಳು ಇಲ್ಲಿಗೆ ಆಗಮಿಸಿ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.