ಕೊಡಗು : 15 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕೊಡಗಿನ ಇತಿಹಾಸ ಪ್ರಸಿದ್ಧ ಪಾಲೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದಿದೆ. ಮಣ್ಣು ಕುಸಿದ ರಭಸಕ್ಕೆ ದೇವಾಲಯದ ಕೆಳ ಭಾಗದಲ್ಲಿ ವಾಸವಿರುವ ಅರ್ಚಕರ ಮನೆಗೆ ಹಾನಿಯಾಗಿದೆ. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅರ್ಚಕರಾದ ದೇವಿ ಪ್ರಸಾದ್ ವಾಸವಿದ್ದ ಮನೆಯ ಹಿಂದೆ ಇದ್ದ ಜರೆಯ ಮಣ್ಣು ಕುಸಿದಿದೆ. ರಭಸವಾಗಿ ಕುಸಿದ ಮಣ್ಣು ಅಡುಗೆಮನೆಗೆ ನುಗ್ಗಿದೆ.
ಇದೀಗ ಮತ್ತೆ ಮಳೆ ಬಿರಿಸು ಪಡೆದಿರುವುದರಿಂದ ಇನ್ನೂ ಹೆಚ್ಚಿನ ಅನಾಹುತವಾಗುವ ಸಂಭವವಿದ್ದು, ಕುಟುಂಬಸ್ಥರು ಗ್ರಾಮಸ್ಥರ ಸಹಾಯದಿಂದ ಮನೆ ತೆರವುಗೊಳಿಸಿದ್ದಾರೆ. ಕಳೆದ 10 ವರ್ಷದಿಂದ ಮಣ್ಣು ಕುಸಿದ ಸ್ಥಳದಲ್ಲಿ ದೇವಸ್ಥಾನಕ್ಕೆ ತಡೆಗೋಡೆ ನಿರ್ಮಿಸುವಂತೆ ಅರ್ಚಕರ ಕುಟುಂಬ ಹಾಗೂ ಗ್ರಾಮಸ್ಥರು ಜಿಲ್ಲಾಡಳಿತ ಶಾಸಕರನ್ನ ಮನವಿ ಮಾಡಿಕೊಂಡಿದ್ದಾರೆ.
ಇಷ್ಟಾದರೂ ಇಲ್ಲಿ ತಡೆಗೋಡೆ ನಿರ್ಮಾಣವಾಗದಿರುವುದೇ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು, ಮಣ್ಣು ಕುಸಿತದಿಂದ ದೇವಾಲಯದ ಭೋಜನ ಕೊಠಡಿಯ ಪಾಯವೂ ಜಗ್ಗಿ ಹೋಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಜಲಪ್ರಳಯ ಸಂಭವಿಸಿ ನಾಲ್ಕು ವರ್ಷಗಳಾದರೂ ತಪ್ಪಿಲ್ಲ ಗೋಳು: ಮೊಣ್ಣಂಗೇರಿಯಲ್ಲಿ ಜನರ ಸಂಕಷ್ಟ