ಭಾಗಮಂಡಲ(ಕೊಡಗು): ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಲಕಾವೇರಿಯ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಎರಡು ಅರ್ಚಕ ಕುಟುಂಬಗಳ ಮನೆ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದು, 6 ಮಂದಿ ಕಣ್ಮರೆಯಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ತಲಕಾವೇರಿಯಲ್ಲಿ ಪೂಜೆ ಮಾಡುತ್ತಿದ್ದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಅವರ ಪತ್ನಿ ಶಾಂತಲಾ, ಸಹೋದರ ವಿಠ್ಠಲ ಆಚಾರ್, ಕುಂದಾಪುರ ಮೂಲದ (38) ವರ್ಷದ ಇಬ್ಬರು ಯುವಕರು ಹಾಗೂ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆ ಸೇರಿದಂತೆ ಒಟ್ಟು 6 ಮಂದಿ ಕಣ್ಮರೆಯಾಗಿದ್ದಾರೆ.
ಈಗಾಗಲೇ ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ, ಸ್ಥಳೀಯ ಅಧಿಕಾರಿಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟು 8 ಎಕರೆ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದ್ದು, ಆ ಪ್ರದೇಶದಲ್ಲಿ ಮನೆಗಳು ಇದ್ದವೆಂದು ಹೇಳುವ ಯಾವುದೇ ಕುರುಹುಗಳು ಕಾಣಿಸುತ್ತಿಲ್ಲ. ಬೆಳಗ್ಗೆ 7 ಗಂಟೆಗೆ ತೋಟದ ರೈಟರ್ ಒಬ್ಬರು ಅಲ್ಲಿಗೆ ಹೋದಂತಹ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಈಗಾಗಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಡೌಡಾಯಿಸಿದ್ದಾರೆ. ಆದ್ರೆ ಘಟನಾ ಸ್ಥಳಕ್ಕೆ ಯಾವುದೇ ಯಂತ್ರಗಳನ್ನು ತೆಗೆದುಕೊಂಡು ಹೋಗಲು ಅಸಾಧ್ಯವಾಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ.