ಕೊಡಗು: ಡಿಸೆಂಬರ್ 18ರಂದು ವಿಶ್ವ ಅಲ್ಪಸಂಖ್ಯಾತರ ದಿನಾಚರಣೆ ಭಾಗವಾಗಿ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದಲ್ಲಿ ಕೊಡವ ನ್ಯಾಷನಲ್ ಕೌನಿಲ್ಸ್ ವತಿಯಿಂದ ‘ತೋಕ್ ನಮ್ಮೆ’ (ಕೋವಿ ಹಬ್ಬ) ಆಚರಿಸಲಾಯಿತು.
ಕೋವಿ ಆಚರಣೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು, ಕೋವಿಯನ್ನು ಹೆಗಲೇರಿಸಿಕೊಂಡು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಶ್ರದ್ಧಾ ಭಕ್ತಿಯಿಂದ ಕೋವಿಗೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಮೈದಾನದಲ್ಲಿ ಒಂದು ಸುತ್ತು ಹಾಕಿದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕೊಡವ ಮಹಿಳೆಯರು, ಪುರಷರಿಗೆಲ್ಲರಿಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ನೂರು ಮೀಟರ್‌ಗೂ ಎತ್ತರದಲ್ಲಿ ಇರಿಸಿದ್ದ ತೆಂಗಿನಕಾಯಿಗೆ ಕೆಲವರು ಗುರಿ ಮಿಸ್ ಆಗದಂತೆ ಗುಂಡು ಹೊಡೆದು ಬಹುಮಾನ ಪಡೆದುಕೊಂಡರು. ಆ ಮೂಲಕ ಕೋವಿ ತಮ್ಮ ಜನ್ಮಸಿದ್ಧ ಹಕ್ಕು ಎಂದು ಸಾರಿದರು.
ಈ ಸಂದರ್ಭ ಮಾತನಾಡಿದ ಕೊಡವ ನ್ಯಾಷನಲ್ ಕೌನಿಲ್ಸ್ ಅಧ್ಯಕ್ಷ ಎನ್.ಯು.ನಾಚಪ್ಪ, ನಮ್ಮನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಬೇಕು. ನಮ್ಮ ಜನ್ಮಸಿದ್ಧ ಹಕ್ಕಾಗಿರುವ ಕೋವಿಯ ಹಕ್ಕನ್ನು ಸರ್ಕಾರ ಯಾವುದೇ ಗೊಂದಲವಿಲ್ಲದೆ ಮುಂದುವರೆಸಬೇಕು. ಅದನ್ನು ಸಾರುವುದಕ್ಕಾಗಿಯೇ ಕಳೆದ 10 ವರ್ಷಗಳಿಂದಲೂ ಕೋವಿ ಉತ್ಸವ ಆಚರಿಸಲಾಗುತ್ತಿದೆ ಎಂದರು.