ಕೊಡಗು : ಅವರೆಲ್ಲ ಕಾಡಿನಲ್ಲಿ ಸ್ವಚ್ಚಂಧವಾಗಿ ಬದುಕಿ ಬಾಳುತ್ತಿದ್ದ ಮಕ್ಕಳು. ನಾಡಿನಿಂದ ದೂರವೇ ಉಳಿದಿರುವ ಅವರಿಗೆಲ್ಲ, ಆಧಾರ್ ಕಾರ್ಡ್ ಮರೀಚಿಕೆಯಾಗಿತ್ತು. ಆಧಾರ್ ಇಲ್ಲ ಎಂಬ ಕಾರಣಕ್ಕಾಗಿಯೇ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದರು. ಕೊಡಗು ಜಿಲ್ಲಾಡಳಿತದ ವಿನೂತನ ಹೆಜ್ಜೆಯಿಂದ ಜನರು ಆಧಾರ್ ಕೈಗೆ ಸಿಗುವ ಖುಷಿಯಲ್ಲಿದ್ದಾರೆ.
ಬದುಕಿಗೆ ಆಧಾರವಿಲ್ಲದ ಬುಡಕಟ್ಟು ಜನರಿಗೆ ಆಧಾರ್ ಇಲ್ಲದೆ ಸರ್ಕಾರದಿಂದ ಸಿಗುವ ಸೌಲಭ್ಯ ಸಿಗುತ್ತಿರಲಿಲ್ಲ. ಹೇಗಾದರೂ ಮಾಡಿ ಇವರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ನಿರ್ಧರಿಸಿದ ಕೊಡಗು ಜಿಲ್ಲಾಡಳಿತ ಸಂಚಾರಿ ಆಧಾರ್ ನೊಂದಣಿಗೆ ಚಾಲನೆ ಕೊಟ್ಟಿತ್ತು.
ಹೀಗಾಗಿಯೇ ಜಿಲ್ಲೆಯ ಎಲ್ಲಾ ಹಾಡಿಗಳಿಗೆ ತೆರಳುತ್ತಿರುವ ಆಧಾರ್ ನೋಂದಣಿ ಸಿಬ್ಬಂದಿ ಹಾಡಿ ಜನರಿಗೆ ಸ್ಥಳದಲ್ಲೇ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೂ ಆಧಾರ್ ಮಾಡಿ ಕೊಡುತ್ತಿರುವುದರಿಂದ ವಿದ್ಯಾರ್ಥಿ ವೇತನ ಪಡೆಯಲು ಮತ್ತು ದಾಖಲಾತಿಗಳಿಗೆ ಪರದಾಡುತ್ತಿದ್ದ ಶಿಕ್ಷಕರಿಗೂ ಅನುಕೂಲ ಆಗ್ತಿದೆ. ಕಾಡಿನ ಮಕ್ಕಳಿಗೂ ಆಧಾರ್ ಕಾರ್ಡ್ ದೊರಕಿಸಿಕೊಟ್ಟು, ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡುವಲ್ಲಿ ಜಿಲ್ಲಾಡಳಿತ ಯಶ ಕಂಡಿದೆ.