ಕೊಡಗು: ಜಿಲ್ಲೆಯಲ್ಲಿ ಆ.24ರಿಂದ ಆ.27ರ ವರೆಗೆ ನಿಷೇಧಾಜ್ಞೆ ಜಾರಿ ಹಿನ್ನೆಲೆ ಮುಂಜಾಗ್ರತ ಕ್ರಮ ಕೈಗೊಳ್ಳಲು ದಕ್ಷಿಣ ವಲಯ ಐಜಿ ಪ್ರವೀಣ್ ಮಧುಕರ್ ಪವಾರ್ ಅವರು ಇಂದು ಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ಕುರಿತು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಆದೇಶ ಹೊರಡಿಸಿದ ಹಿನ್ನೆಲೆ ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಹೊರ ಜಿಲ್ಲೆಯಿಂದ ಬರುವವರನ್ನೂ ತಪಾಸಣೆ ನಡೆಸಲಾಗುತ್ತಿದೆ. ಹೆಚ್ಚಿನ ಭದ್ರತೆಗಾಗಿ ಜಿಲ್ಲೆಗೆ ಹೊರ ಜಿಲ್ಲೆಯ ಪೊಲೀಸ್ ತಂಡಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ತಪಾಸಣೆ ನಡೆಸಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆ.26ರಂದು ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ಮಡಿಕೇರಿ ಚಲೋ ಹಾಗೂ ಬಿಜೆಪಿಯಿಂದ ಜನಜಾಗೃತಿ ಸಮಾವೇಶ ನಡೆಯಲಿರುವ ಹಿನ್ನೆಲೆ ನಿನ್ನೆ ಜಿಲ್ಲಾಧಿಕಾರಿಗಳು ಮುಂಜಾಗ್ರತ ಕ್ರಮವಾಗಿ 4 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ ಇಂದು ಐಜಿಪಿ ಸಭೆ ನಡೆಸಿದರು.
ಆದ್ರೆ ಈ ಕುರಿತು ಇಂದು ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಆ. 26 ರಂದು ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಕೊಡಗು ಚಲೋ ಪ್ರತಿಭಟನೆಯನ್ನು ಕೈಬಿಟ್ಟಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಬಗ್ಗೆ ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್ 24 ರಿಂದ ನಾಲ್ಕು ದಿನ ನಿಷೇಧಾಜ್ಞೆ ಜಾರಿ