ಕುಶಾಲನಗರ (ಕೊಡಗು): ಕಾವೇರಿ ನದಿ ನೀರಿನ ಪ್ರವಾಹದಿಂದ ಜಲಾವೃತವಾದ ಪಟ್ಟಣದ ಕುವೆಂಪು ಬಡಾವಣೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಅವರ ವಿರುದ್ಧ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಅಪ್ಪಚ್ಚು ರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಜೊತೆಗಿದ್ದರು. ಪ್ರವಾಹದಿಂದ ತತ್ತರಿಸಿರುವ ಕುವೆಂಪು ಬಡಾವಣೆ, ಸಾಯಿ ಬಡಾವಣೆ, ರಸೂಲ್ ನಗರ ಹಾಗೂ ಶೈಲಜಾ ಬಡಾವಣೆಗಳ ಪರಿಸ್ಥಿತಿ ಅವಲೋಕಿಸಲು ಬಂದಿದ್ದ ಸಚಿವರನ್ನು ನಿವಾಸಿಗಳು ತರಾಟೆ ತೆಗೆದುಕೊಂಡರು.
ಕಾವೇರಿ ನೀರಾವರಿ ನಿಗಮದಿಂದ ₹ 80 ಲಕ್ಷ ವೆಚ್ಚದಲ್ಲಿ ನದಿಯಲ್ಲಿ ತುಂಬಿರುವ ಹೂಳನ್ನು ತೆಗೆಯಲು ಮುಂದಾಗಿದ್ದು ಮತ್ತು ಒಳ ಚರಂಡಿ ಮಾಡಲು ನದಿ ದಂಡೆಯನ್ನು ಒಡೆದಿದ್ದೇ ಪ್ರವಾಹಕ್ಕೆ ಕಾರಣವಾಗಿದೆ. ಅಲ್ಲದೇ ನಿಗಮದಿಂದ ಮುಳ್ಳುಸೋಗೆ ಗ್ರಾಮದ ಒಳಚರಂಡಿ ಕಾಮಗಾರಿ ಹೂಳನ್ನು ನದಿ ಮಧ್ಯೆ ತಂದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿಯೇ, ಕಳೆದ ಮೂರು ವರ್ಷಗಳಿಂದ ಪ್ರವಾಹವನ್ನು ಎದುರಿಸುತ್ತಿದ್ದೇವೆ. ಮಳೆಗಾಲಕ್ಕೂ ಮೊದಲೇ ಕಾವೇರಿ ನದಿಯಲ್ಲಿ ಹೂಳು ತೆಗೆಯಬೇಕಿತ್ತು. ಆದರೆ, ಮಳೆಗಾಲ ಹತ್ತಿರ ಬಂದಾಗ ಅರೆಬರೆ ಕೆಲಸ ಮಾಡಿದ್ದಾರೆ. ಅಧಿಕಾರಿಗಳು ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರೊಂದಿಗೆ ಅಳಲು ತೋಡಿಕೊಂಡರು.