ಕೊಡಗು: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ಜಿಲ್ಲೆಯ ಗಡಿ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ಮಾಡಿ ಒಳ ಬಿಡಲಾಗುತ್ತಿದೆ. ಪ್ರಯಾಣಿಕರು ಕೋವಿಡ್ ನೆಗೆಟಿವ್ ರಿಪೋರ್ಟ್ ಅಥವಾ ಒಂದು ಡೋಸ್ ಲಸಿಕೆ ಪಡೆದಿರುವ ಸರ್ಟಿಫಿಕೇಟ್ ಹೊಂದುವುದು ಕಡ್ಡಾಯವಾಗಿದೆ.
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಉಲ್ಬಣಗೊಂಡಿದೆ. ಹೀಗಾಗಿ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಕಾರಿಗಳಿಗೆ ಕ್ರಮಕ್ಕೆ ಆದೇಶಿಸಿದ್ದಾರೆ.
ಜಿಲ್ಲೆಯ ಹೋಟೆಲ್, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಮುಂತಾದ ವಾಸ್ತವ್ಯ ಸೇವೆಗಳನ್ನು ನೀಡುವ ಸ್ಥಳಗಳಿಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಮಾಡಿದ ಆರ್ಟಿ-ಪಿಸಿಆರ್ ನೆಗಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಓದಿ: ಆರ್ಟಿಪಿಸಿಆರ್ ವರದಿ ಇಲ್ಲದೆ ರೈಲು ನಿಲ್ದಾಣಕ್ಕೆ ಬಂದಿಳಿದವರು ಕ್ವಾರಂಟೈನ್!
ಇತರೆಡೆಯಿಂದ ಜಿಲ್ಲೆಗೆ ಆಗಮಿಸುವವರ ವಿವರಗಳನ್ನು ಸಂಬಂಧಪಟ್ಟ ಕಾರ್ಯ ವ್ಯಾಪ್ತಿಯ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ರಾಜ್ಯದ ಕೋವಿಡ್ ವರದಿ:
ರಾಜ್ಯದಲ್ಲಿ ಸೋಮವಾರ (ಆಗಸ್ಟ್ 2) 1,285 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,08,284 ಕ್ಕೆ ಏರಿಕೆಯಾಗಿದೆ.
ಸೋಮವಾರ 1,383 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಈವರೆಗೆ 28,47,627 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 24,021 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಪಾಸಿಟಿವಿಟಿ(ಕೋವಿಡ್ ದೃಢಪಡುವ ಪ್ರಮಾಣ) ದರ ಶೇ. 0.96 ರಷ್ಟಿದೆ. ಸೋಮವಾರ 1,33,030 ಜನರಿಗೆ ಕೊರೊನಾ ತಪಾಸಣೆ ಮಾಡಲಾಗಿದೆ.
ದೇಶದ ಕೋವಿಡ್ ವರದಿ:
ಆಗಸ್ಟ್ 2 ಸೋಮವಾರದಂದು ದೇಶದಲ್ಲಿ ಹೊಸದಾಗಿ 40,134 ಜನರಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 3,16,95,958 ಕ್ಕೆ ಏರಿದೆ. 36,946 ಮಂದಿ ಸೋಂಕಿತನಿಂದ ಚೇತರಿಸಿಕೊಂಡಿದ್ದಾರೆ. ಸೋಮವಾರದವರೆಗೆ ಒಟ್ಟು 3,08,57,467 ಮಂದಿ ಗುಣಮುಖರಾಗಿದ್ದಾರೆ.