ಕೊಡಗು : ಜಿಲ್ಲೆಯಲ್ಲಿ ಇಂದು ಧಾರಾಕಾರವಾಗಿ ಮಳೆಯಾಗಿದ್ದು, ತಲಕಾವೇರಿ, ಭಾಗಮಂಡಲ, ಬ್ರಹ್ಮಗಿರಿ ತಪ್ಪಲು, ನಾಪೋಕ್ಲು, ಮಡಿಕೇರಿ ಮಾದಾಪುರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.
ಮತ್ತೊಂದೆಡೆ ಎರಡು ದಿನಗಳ ಕಾಲ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಸೋಮವಾರ ಜಿಲ್ಲೆಯಲ್ಲಿ 64 ಮಿಲಿ ಮೀಟರ್ ನಿಂದ 115 ಮಿಲಿ ಮೀಟರ್ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಮಂಗಳವಾರ ಅದರ ತೀವ್ರತೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, 115 ಮಿಲಿ ಮೀಟರ್ನಿಂದ 204 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮಾಹಿತಿಯ ಆಧಾರದಲ್ಲಿ ಕೊಡಗು ಜಿಲ್ಲಾಡಳಿತ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 6 ರಿಂದ ಮಂಗಳವಾರ ಬೆಳಿಗ್ಗೆ 6 ವರೆಗೆ ಯೆಲ್ಲೋ ಅಲರ್ಟ್ ಮತ್ತು ಮಂಗಳವಾರ ಬೆಳಿಗ್ಗೆ 6 ರಿಂದ ಬುಧವಾರ ಬೆಳಿಗ್ಗೆ 6 ಗಂಟೆವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈ ಸಮಯದಲ್ಲಿ ಜನರು ಎಚ್ಚರಿಕೆ ಇಂದ ಇರುವಂತೆ ಸೂಚಿಸಿದೆ.