ಕೊಡಗು : ಜಿಲ್ಲೆಯ ಮಡಿಕೇರಿ ತಾಲೂಕಿನ ಕೋರಂಗಾಲದಲ್ಲಿ ಭೂ ಕುಸಿತ ಉಂಟಾಗಿ ಮಣ್ಣಿನಲ್ಲಿ ಸಿಲುಕಿದ್ದ ನಾಲ್ಕು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ.
ಭಾಗಮಂಡಲ ಸಮೀಪದ ಕೋರಂಗಾಲದ ಬಾಲಕೃಷ್ಣ, ಯಶ್ವಂತ, ಯಮುನಾ ಹಾಗೂ ಉದಯ ಮೃತ ದುರ್ದೈವಿಗಳು. ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭೂ ಕುಸಿತ ಸಂಭವಿಸಿದ ಪರಿಣಾಮ ಇವರೆಲ್ಲ ಮೃತಪಟ್ಟಿದ್ದಾರೆ. ಭೂ ಕುಸಿತದಲ್ಲಿ ಐವರು ಸಿಲುಕಿದ್ದರು. ಈಗ ನಾಲ್ವರ ಮೃತರ ದೇಹ ಪತ್ತೆಯಾಗಿದ್ದು, ಮತ್ತಷ್ಟು ಶೋಧ ಕಾರ್ಯ ನಡೆಸಲಾಗುತ್ತಿದೆ.
ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಗೆ ಭೂ ಕುಸಿತ ಉಂಟಾಗಿತ್ತು. ಈ ವೇಳೆ ಐದು ಮಂದಿ ಸಿಲುಕಿ ಕಣ್ಮರೆ ಆಗಿದ್ದರು. ಅದರಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದು, ಅವರ ದೇಹಗಳನ್ನು ಹೊರ ತೆಗೆಯಲಾಗಿದೆ. ಈ ಸಂಬಂಧ ಮೃತ ಕುಟುಂಬಗಳಿಗೆ ಮಡಿಕೇರಿಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡ 5 ಲಕ್ಷ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಮಳೆಯಿಂದ ಹಾನಿಗೊಳಗಾಗಿರುವ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ಶಾಸಕರು ಹಾಗೂ ಸಂಸದರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ತಂಡ ಕುಶಾಲನಗರದ ಪ್ರವಾಹ ಪೀಡಿತ ಬಡಾವಣೆ, ಹೆದ್ದಾರಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅವಲೋಕಿಸಿದ್ದಾರೆ. ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವಿವರ:
*ಮಡಿಕೇರಿ ತಾಲೂಕಿನ ಭಾಗಮಂಡಲ, ಹೊದ್ದೂರು, ಕಿಗ್ಗಾಲು, ಐಕೊಳ, ಕೋಡಂಬೂರು ಒಟ್ಟು 5 ಪ್ರದೇಶಗಳು
*ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಗುಹ್ಯ ಪ್ರದೇಶಗಳು
*ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗುಂಡಿ, ಬೆಟ್ಟದಕಾಡು ಪ್ರದೇಶಗಳು
*ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಯಿ, ಕುವೆಂಪು, ತಮ್ಮಣ್ಣ ಶೆಟ್ಟಿ, ಇಂದಿರಾ, ನಿಜಾಮುದ್ದೀನ್ ಬಡಾವಣೆಗಳು
*ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅರಸು, ನೆಹರು, ಸುಭಾಷ್, ವಿಜಯ ನಗರಗಳು ಸೇರಿದಂತೆ ಮಲೆತಿರಿಕೆ ಬೆಟ್ಟ, ಮೊಗರಗಳ್ಳಿ, ಸುಂಕದಕಟ್ಟೆ, ಅಪ್ಪಯ್ಯ ಸ್ವಾಮಿ ರಸ್ತೆ ಪ್ರದೇಶಗಳಲ್ಲಿ ಪ್ರವಾಹಕ್ಕೊಳಗಾಗಿವೆ.
ಮಳೆಯಿಂದ ಬಂದ್ ಆಗಿರುವ NH, SH, PWD ರಸ್ತೆಗಳು:
*ವಿರಾಜಪೇಟೆ ಮಾಕುಟ್ಟ ಸಂಪರ್ಕ SH 91 ರಸ್ತೆ ಬಂದ್
*ಭಾಗಮಂಡಲ ತಲಕಾವೇರಿ ಸಂಪರ್ಕ SH ರಸ್ತೆ ಬಂದ್
*ಭಾಗಮಂಡಲ ಮಡಿಕೇರಿ ಸಂಪರ್ಕ SH ರಸ್ತೆ ಬಂದ್
*ಮೂರ್ನಾಡು ವಿರಾಜಪೇಟೆ ಸಂಪರ್ಕ SH ರಸ್ತೆ ಬಂದ್
*ಗೋಣಿಕೊಪ್ಪ ಪೊನ್ನಂಪೇಟೆ ಸಂಪರ್ಕSH ರಸ್ತೆ ಬಂದ್
*ಕೊಯನಾಡು ಜೋಡುಪಾಲ ಸಂಪರ್ಕ PWD ರಸ್ತೆ ಬಂದ್
*ಅಯ್ಯಂಗೇರಿ ಭಾಗಮಂಡಲ ಸಂಪರ್ಕ PWD ರಸ್ತೆ ಬಂದ್
*ನಾಪೋಕ್ಲು ಪಾರಾಣೆ ಸಂಪರ್ಕ PWD ರಸ್ತೆ ಬಂದ್
*ಸಿದ್ದಾಪುರ ಕರಡಿಗೋಡು ಸಂಪರ್ಕ PWD ರಸ್ತೆ ಬಂದ್
*ಭಾಗಮಂಡಲ ನಾಪೋಕ್ಲು ಸಂಪರ್ಕ PWD ರಸ್ತೆ ಬಂದ್
*ಮೂರ್ನಾಡು ನಾಪೋಕ್ಲು ಸಂಪರ್ಕ PWD ರಸ್ತೆ ಬಂದ್
*ನಿಟ್ಟೂರು ಬಾಳೆಲೆ ಸಂಪರ್ಕ PWD ಸಂಪರ್ಕ ರಸ್ತೆ ಬಂದ್
*ಗೋಣಿಕೊಪ್ಪ ಪಾಲಿಬೆಟ್ಟ ಸಂಪರ್ಕ PWD ರಸ್ತೆ ಬಂದ್
ಪ್ರವಾಹದಿಂದ ನಿರಾಶ್ರಿತರಾದವರು, ಪರಿಹಾರ ಕೇಂದ್ರಗಳ ವಿವರ:
*ಕೊಡಗು ಜಿಲ್ಲೆಯಲ್ಲಿ ಒಟ್ಟು 21 ಪರಿಹಾರ ಕೇಂದ್ರಗಳಿದ್ದು, ಸುಮಾರು 323 ಕುಟುಂಬಗಳ 993 ಜನರಿಗೆ ಆಶ್ರಯ ನೀಡಲಾಗಿದೆ.
*ಸೋಮವಾರಪೇಟೆ ತಾಲ್ಲೂಕಿನಲ್ಲಿ 4 ಪರಿಹಾರ ಕೇಂದ್ರಗಲಿದ್ದು, ತಾಲ್ಲೂಕಿನ 5 ಕುಟುಂಬಗಳ 20 ಮಂದಿಗೆ ಆಶ್ರಯ ನೀಡಲಾಗಿದೆ.
*ವಿರಾಜಪೇಟೆ ತಾಲ್ಲೂಕಿನಲ್ಲಿ 6 ಪರಿಹಾರ ಕೇಂದ್ರಗಳಿದ್ದು, 240 ಕುಟುಂಬಗಳ 749 ಮಂದಿಗೆ ಆಶ್ರಯ ಒದಗಿಸಲಾಗಿದೆ.
*ಮಡಿಕೇರಿ ತಾಲ್ಲೂಕಿನಲ್ಲಿ 8 ಪರಿಹಾರ ಕೇಂದ್ರಗಳಿವೆ. ವಿರಾಜಪೇಟೆ ತಾಲ್ಲೂಕಿನಲ್ಲಿ 78 ಕುಟುಂಬಗಳ 224 ಮಂದಿಗೆ ಆಶ್ರಯ ಒದಗಿಸಲಾಗಿದೆ.