ಶನಿವಾರಸಂತೆ(ಕೊಡಗು): ಇಲ್ಲಿನ ಚಿಕ್ಕ ಕೊಳತ್ತೂರು ಗ್ರಾಮದ ಶಿಕ್ಷಕ ಸಿ.ಎಸ್. ಸತೀಶ್ ಅವರ ಮನೆಯಲ್ಲಿ ಸುಂದರ ಉದ್ಯಾನವನ ಅರಳಿ ನಿಂತಿದೆ.
ಮುಳ್ಳೂರು ಸರ್ಕಾರಿ ಶಾಲೆಯನ್ನು ರಾಜ್ಯದಲ್ಲಿ ಮಾದರಿ ಶಾಲೆಯನ್ನಾಗಿ ಮಾಡಿದ ಶಿಕ್ಷಕ ಸತೀಶ್ ತಮ್ಮ ಮನೆಯಲ್ಲೂ ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು ಸರಳವಾಗಿಯೇ ಮಾದರಿ ಉದ್ಯಾನವನ ನಿರ್ಮಿಸಿದ್ದಾರೆ. ಲಾಕ್‌ಡೌನ್ ರಜೆ ಸಮಯವನ್ನು ಸದ್ಬಳಕೆ ಮಾಡಿಕೊಂಡ ಅವರು ಕ್ರಿಯಾಶೀಲ ಕೆಲಸ ಮಾಡಿದ್ದಾರೆ.
ಕುಟುಂಬದ ಸದಸ್ಯರ ಸಹಕಾರದೊಂದಿಗೆ ಪುಟ್ಟದಾದ ಸುಂದರ ಉದ್ಯಾನವನ್ನು ನಿರ್ಮಿಸಿದ್ದಾರೆ. ಇಲ್ಲಿ ಕಿರಿದಾದ ತಾವರೆ ಕೊಳ, ಫಾಲ್ಸ್, ತೂಗು ಸೇತುವೆ, ವಿಶ್ರಾಂತ ಡಾಬಾ ಇವುಗಳೆಲ್ಲವನ್ನು ಕೇವಲ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ನಿರ್ಮಿಸಿದ್ದಾರೆ.
ಕೇವಲ ಮಣ್ಣಿನಿಂದಲೇ ನಿರ್ಮಿಸಿ ಸಿಮೆಂಟ್ ತಿಳಿ ನೀಡಿ ನಿರ್ಮಿಸಿರುವ ಏಳೆಂಟು ಮೆಟ್ಟಿಲುಗಳಿಂದ ಹರಿದುಬರುವ ನೀರಿನ ಶಬ್ದದ ನಿನಾದ ಹಾಗೂ ಅಲ್ಲಿಗೆ ಬರುವ ಪಕ್ಷಿಗಳ ಕಲರವ ಸೇರಿ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದು ಜಲಪಾತದಲ್ಲಿ ನೀರು ಮೇಲಿನಿಂದ ಧುಮುಕುವಂತೆ ನಿರ್ಮಿಸಲಾಗಿದ್ದು, ನೈಜ ನಿಸರ್ಗ ಸೌಂದರ್ಯವನ್ನು ಸೃಷ್ಟಿಸಿವೆ.
20 ಅಡಿ ವ್ಯಾಸವಿರುವ ಮಳೆ ನೀರು ಸಂಗ್ರಹಿಸಲು ನಿರ್ಮಿಸಿರುವ ಕೃಷಿ ಹೊಂಡದಂತಿರುವ ಕೊಳಕ್ಕೆ ಸೀಮೆ ಬಿದಿರು ಮತ್ತು ನೈಲಾನ್ ಹಗ್ಗ ಬಳಸಿ ಸುಮಾರು ಆರು ಮೀಟರ್ ಉದ್ದವಿರುವ ಪುಟ್ಟ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಅಲ್ಲದೆ ಇಲ್ಲಿ ಸಾವಯವ ಮಾದರಿಯ ತರಕಾರಿಯನ್ನು ಕೂಡ ಬೆಳೆಯುತ್ತಿದ್ದಾರೆ. ಮೂಲಂಗಿ, ಬೆಂಡೆಕಾಯಿ, ಸೌತೆಕಾಯಿ, ಬೀನ್ಸ್, ಹೀರೆಕಾಯಿ, ಅವರೇ, ಕುಂಬಳ, ನೂಕೋಲು, ಹಾಗಲಕಾಯಿ ಬೆಳೆದು ದಿನ ನಿತ್ಯದ ಅಡುಗೆಗೆ ತಾಜಾ ತರಕಾರಿಗಳನ್ನು ಬೆಳೆದು ಗಮನ ಸೆಳೆದಿದ್ದಾರೆ.