ಕೊಡಗು: ಕೊರೊನಾ ಬಂದಾಗಿನಿಂದ ಆರೋಗ್ಯ ಇಲಾಖೆ, ಸರ್ಕಾರಗಳು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಜನರಿಗೆ ಹೇಳುತ್ತಲೇ ಇವೆ. ಆದರೆ, ಸ್ವಚ್ಛತೆಗೆ ಆದ್ಯತೆ ಕೊಡಬೇಕಾದ ಸಂಸ್ಥೆಗಳೇ ಬೇಕಾಬಿಟ್ಟಿ ಕಸ ವಿಲೇವಾರಿ ಮಾಡಿರುವುದರಿಂದ ಜನರು ಸಂಕಷ್ಟ ಎದುರಿಸಬೇಕಾಗಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಭುವನಗಿರಿಯ ನೂರಾರು ಕುಟುಂಬಗಳಿಗೆ, ಕುಶಾಲನಗರದ ನೂರಾರು ಟನ್ ಕಸದ ರಾಶಿಯಿಂದ ಹಲವು ರೋಗಗಳಿಗೆ ತುತ್ತಾಗುವ ಆತಂಕ ಎದುರಿಸುತ್ತಿವೆ. ಪಟ್ಟಣದಲ್ಲಿ ನಿತ್ಯ ಹತ್ತಾರು ಲೋಡ್ ಕಸ ಸಂಗ್ರಹವಾಗುತ್ತದೆ. ಕಸ ಸಂಗ್ರಹಿಸುವ ಪಟ್ಟಣ ಪಂಚಾಯತ್ ಭುವನಗಿರಿಯಲ್ಲಿರುವ ತನ್ನ ಆರು ಎಕರೆ ಪ್ರದೇಶದಲ್ಲಿ ಕಸ ಸುರಿಯುತ್ತಿದೆ.
ಪಟ್ಟಣದ ಎಲ್ಲಾ ರೀತಿಯ ಕಸವನ್ನು ಅಲ್ಲಿಗೆ ತಂದು ಸುರಿಯುವುದಷ್ಟೇ ಅಲ್ಲ, ಅದರ ಜೊತೆಗೆ ಸಾಕಷ್ಟು ಸತ್ತ ಪ್ರಾಣಿಗಳನ್ನು ಅಲ್ಲಿಯೇ ತಂದು ಎಸೆಯುತ್ತಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಆರು ಎಕರೆ ಜಾಗದಲ್ಲಿ ಎಲ್ಲಿ ಸ್ಥಳ ಖಾಲಿ ಇದೆಯೋ ಅಲ್ಲಿಗೆ ಸುರಿದು ಸುಮ್ಮನಾಗುತ್ತಿದೆ. ಇದರಿಂದ ರೋಸಿ ಹೋಗಿರುವ ಇಲ್ಲಿನ ಜನರು ಕಸ ವಿಲೇವಾರಿ ಜಾಗದಲ್ಲಿ ನಿಂತು ಪಟ್ಟಣ ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಲೆತಲಾಂತರದಿಂದಲೂ ಭುವನಗಿರಿಯಲ್ಲಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ, ಕುಶಾಲನಗರ ಪಟ್ಟಣ ಪಂಚಾಯತ್ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿದೆ. ಕಸ ಸುರಿಯುವ ಜಾಗದ ಸುತ್ತಲೂ ಕೇವಲ ಐದಾರು ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಿದೆ. ಹೀಗಾಗಿ, ನೂರಾರು ಲೋಡ್‌ನಷ್ಟು ಕಸ ಅಲ್ಲಿಯೇ ಕೊಳೆತು ಸಹಿಸಲು ಅಸಾಧ್ಯ ದುರ್ನಾತ ಬೀರುತ್ತಿದೆ.
ಕೊಳೆತ ಕಸದ ರಾಶಿಯಿಂದ ನೊಣಗಳು ಬರುತ್ತಿವೆ. ಜನರು ಕನಿಷ್ಟ ನೆಮ್ಮದಿಯಿಂದ ಊಟ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಊಟಕ್ಕೆಂದು ಕುಳಿತರೆ ತಟ್ಟೆಗೆ ಕೈ ಇಡುವ ಮೊದಲೇ ನೊಣಗಳು ಮುತ್ತಿಕೊಳ್ಳುತ್ತಿವೆ. ಕಸದ ರಾಶಿಯ ಸುತ್ತಲೂ ಚಿಕ್ಕದಾದ ತಡೆಗೋಡೆ ಇರುವುದರಿಂದ ಕಸದ ರಾಶಿಯಿಂದ ಪ್ಲಾಸ್ಟಿಕ್ ಗಾಳಿಯಲ್ಲಿ ತೂರಾಡಿ ಊರಿಗೆಲ್ಲಾ ಬರುತ್ತಿವೆ. ಇದರಿಂದ ಎಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆಯೋ ಎಂಬ ಆತಂಕ ಜನರಲ್ಲಿದೆ.
ಕಸವನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಹಲವು ಬಾರಿ ಪ್ರತಿಭಟಿಸಿದ್ದರೂ ಪ್ರಯೋಜವಾಗಿಲ್ಲ. ಕಸವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಮಾಡುವುದಾಗಿ ಪಟ್ಟಣ ಪಂಚಾಯತ್ ಶೆಡ್ ನಿರ್ಮಿಸಿ ಎರಡು ವರ್ಷಗಳೇ ಕಳೆದಿವೆ. ಅದು ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.