ವಿರಾಜಪೇಟೆ (ಕೊಡಗು) : ಪಟ್ಟಣದ ದಂತ ವ್ಯದ್ಯಕೀಯ ಕಾಲೇಜಿನ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಅರೋಪಿಗಳನ್ನು ಖಚಿತ ಮಾಹಿತಿ ಮೆರೆಗೆ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಎಂಎ ಮೂದಾಸೀರ್ ಅಜಮ್ಮದ್, ಎಸ್ಝಡ್ ಮಹಮ್ಮದ್ ಫಾರೂಕ್, ಆರ್ಎಸ್ ರಫೀಕ್, ಆರ್ ಮನು, ಎಎಸ್ ಮಹೇಶ್ ಬಂಧಿತ ಅರೋಪಿಗಳು. ಬಂಧಿತರು ಬಿಳಿ ಬಣ್ಣದ ಮಾರುತಿ ಕಾರಿನಲ್ಲಿ ಒಂದು ಲಕ್ಷ ಮೌಲ್ಯದ 3.361 ಗ್ರಾಂ. ಗಾಂಜಾವನ್ನು ಇರಿಸಿಕೊಂಡು ಗ್ರಾಹಕರಿಗೆ ಬಿಡಿ ಬಿಡಿಯಾಗಿ ಕೊಡುತ್ತಿದ್ದರು. ಮಾಹಿತಿ ತಿಳಿದ ನಗರ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಅರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಬೆನ್ನಟ್ಟಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಗಾಂಜಾ ಮಾರಾಟ ಮಾಡಿದ ಐದು ಸಾವಿರ ರೂ. ಮತ್ತು 3.361 ಗ್ರಾಂ. ಗಾಂಜಾ ಹಾಗೂ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಅರೋಪಿಗಳಲ್ಲಿ ಒಬ್ಬ ಮೈಸೂರಿನಲ್ಲಿ ನೆಲಸಿದ್ದು ಇವನ ಮುಖಾಂತರ ಕೊಡಗಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದರಂತೆ. ಕಳೆದ ಹಲವು ವರ್ಷಗಳಿಂದ ವಿರಾಜಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಹಾವಳಿ ಮಿತಿಮೀರಿದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದವು.
ಜಿಲ್ಲಾ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಅವರ ನೇತ್ರತ್ವದಲ್ಲಿ ಸರ್ಕಲ್ ಇನ್ಸಪೆಕ್ಟರ್ ಕ್ಯಾತೇಗೌಡ ಹಾಗೂ ನಗರ ಠಾಣಾಧಿಕಾರಿ ಬೋಜಪ್ಪ, ಸಿಬ್ಬಂದಿಯಾದ ಮುಸ್ತಾಪಾ, ಗಿರೀಶ್, ಸಂತೋಷ್, ರಜನ್, ಲೋಕೇಶ್ ಹಾಗೂ ಗೀತಾ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಭಾಗವಹಿಸಿದ್ದರು.