ಕೊಡಗು: ಕೊಡಗು ಒಂದು ಪುಟ್ಟ ಜಿಲ್ಲೆ. ಹೀಗಿದ್ರೂ ಕೂಡ ತಮ್ಮ ಖ್ಯಾತಿಯನ್ನ ಜನತೆಯೇ ತಿರುಗಿ ನೋಡುವಂತೆ ಮಾಡಿದ ಹೆಗ್ಗಳಿಕೆ ಜಿಲ್ಲೆಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದವರು ಅದೇಷ್ಟೋ ಮಂದಿ. ಅದರಲ್ಲಿ ಒಬ್ಬರು ಗುಡ್ಡೆಮನೆ ಅಪ್ಪಯ್ಯ ಗೌಡರು. ಗುಡ್ಡೆಮನೆ ಅಪ್ಪಯ್ಯ ಗೌಡರನ್ನ ನೇಣಿಗೆ ಹಾಕಿದ ಅ. 31ನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.
ಬ್ರಿಟಿಷರ ವಿರುದ್ಧ ತೊಡೆತಟ್ಟಿದವರಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರು ಒಬ್ಬರು. 1887ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ ಸಂಗ್ರಾಮ ಎಂದು ಗುರುತಿಸಲಾಗಿದೆ. ಆದರೆ, ಅದಕ್ಕೂ ಮೊದಲೇ ಕೊಡಗು, ದಕ್ಷಿಣ ಕನ್ನಡ ಭಾಗದಲ್ಲಿ ಬ್ರಿಟಿಷರ ವಿರುದ್ಧ ಭಾರಿ ಹೋರಾಟ ನಡೆದಿರುವ ಬಗ್ಗೆ ಇತಿಹಾಸವಿದೆ.
ಅಂದು ಹೋರಾಟ ಮಾಡಿದವರಲ್ಲಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಪ್ರಮುಖ ಎನಿಸಿಕೊಳ್ಳುತ್ತಾರೆ. ಗುಡ್ಡೆಮನೆ ಅಪ್ಪಯ್ಯ ಗೌಡರ ಹೋರಾಟ ಬ್ರಿಟಿಷರನ್ನು ಎಷ್ಟು ಬೆಚ್ಚಿ ಬೀಳಿಸಿತ್ತು ಎಂದರೆ ಬ್ರಿಟಿಷ್ ಸರ್ಕಾರಕ್ಕೆ ನಡುಕ ಹುಟ್ಟಿಸುವಷ್ಟರ ಮಟ್ಟಿಗೆ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಪಾತ್ರವಿದೆ.
ಬ್ರಿಟಿಷರ ವಿರುದ್ಧ ಹೋರಾಟ: ಸುಮಾರು 1700ನೇ ಇಸವಿಯಲ್ಲಿ ಇಕ್ಕೇರಿ ರಾಜ ಸೋಮಶೇಖರ್ ಸುಳ್ಯ ಭಾಗವನ್ನು ಕೊಡಗಿನ ದೊಡ್ಡವೀರ ರಾಜೇಂದ್ರನಿಗೆ ಬಹುಮಾನವಾಗಿ ನೀಡಿದ್ದ. ದೊಡ್ಡವೀರ ರಾಜೇಂದ್ರನ ಕಾಲವಾದ ಮೇಲೆ ಚಿಕ್ಕವೀರ ರಾಜೇಂದ್ರನಿಗೆ ಅಧಿಕಾರ ದೊರೆಯುತ್ತದೆ. 1834 ಏಪ್ರಿಲ್ 10ರಲ್ಲಿ ಬ್ರಿಟಿಷರು ಚಿಕ್ಕವೀರ ರಾಜೇಂದ್ರನನ್ನು ವಂಚಿಸಿ ಕೊಡಗನ್ನು ತಮ್ಮ ವಶಕ್ಕೆ ಪಡೆಯುತ್ತಾರೆ.
ಆಡಳಿತಕ್ಕೆ ಅನುಕೂಲ ಆಗಲಿ ಎಂದು ಸುಳ್ಯ ಮತ್ತು ಪುತ್ತೂರನ್ನು ಮಂಗಳೂರು ವಿಭಾಗಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಈ ಸಂದರ್ಭ ಬ್ರಿಟಿಷರ ವಿರುದ್ಧ ತುಂಬಾ ಹೋರಾಟಗಳು ನಡೆಯುತ್ತವೆ. ಈ ಹೋರಾಟದಲ್ಲಿ ಮುಖ್ಯವಾಗಿ ಕೊಡಗು, ಕೆನರಾ ಬಂಡಾಯ ಅಥವಾ ಅಮರಸುಳ್ಯ ದಂಗೆ ಎಂದು ಕರೆಯಲ್ಪಡುವ ಹೋರಾಟವೇ ಪ್ರಮುಖವಾಗಿದೆ.
ಯೋಧರ ತಂಡಗಳು ರಚನೆ: ಪೆರಾಜೆ, ಚೆಂಬು, ಚೊಕ್ಕಾಡಿ, ಬಳ್ಳದ ಗೌಡ ಮುಖಂಡರು ಹಾಗೂ ಕೊಡಗಿನ ಜನರನ್ನೆಲ್ಲ ಕೆದಂಬಾಡಿ ರಾಮಯ್ಯ ಗೌಡ ಅವರು ಒಂದು ಕಡೆ ಸೇರಿಸುವ ಪ್ರಯತ್ನ ಮಾಡುತ್ತಾರೆ. ಮಲೆ ಕುಡಿಯರು, ಹೆಗ್ಡೆ ಸಮಾಜ, ಪೆರಾಜೆಯ ವೀರಣ್ಣ ಬಂಟ, ಸುಬ್ರಾಯ ಹೆಗ್ಡೆ ಮತ್ತು ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡರ ನೇತೃತ್ವದಲ್ಲಿ ಯೋಧರ ತಂಡಗಳು ರಚನೆಯಾಗುತ್ತವೆ.
ಕೂಜುಗೋಡದ ಕಟ್ಟೇಮನೆ ಮುಖ್ಯಸ್ಥರು ಸಹಕಾರ ನೀಡುತ್ತಾರೆ. ಪುತ್ತೂರು ಮತ್ತು ಮಂಗಳೂರನ್ನು ವಶಪಡಿಸಿಕೊಳ್ಳುವುದಕ್ಕಾಗಿ ಸುಳ್ಯ ಹಾಗೂ ಕೊಡಗಿನಲ್ಲಿ ಏಕಕಾಲದಲ್ಲಿ ಹೋರಾಟ ನಡೆಸುವುದೇ ಈ ಗುಂಪಿನ ಉದ್ದೇಶವಾಗಿತ್ತಲ್ಲದೇ, ರಹಸ್ಯವಾಗಿಯೇ ತಂತ್ರಗಾರಿಕೆ ರೂಪಿಸಲಾಯಿತು.
ಕೊಡಗಿನ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ನೇತೃತ್ವದಲ್ಲಿ ಯೋಧರ ಪಡೆ ತೊಡಿಕಾನ ಮೂಲಕ ದಕ್ಷಿಣ ಕನ್ನಡಕ್ಕೆ ಪ್ರವೇಶ ಮಾಡಿತು. ನಂತರ ನಡೆದ ದಾಳಿಯಲ್ಲಿ 1837ರ ಎಪ್ರಿಲ್ 3ಕ್ಕೆ ಪುತ್ತೂರು, 4ಕ್ಕೆ ಪಾಣೆಮಂಗಳೂರನ್ನು ಈ ಹೋರಾಟಗಾರರ ತಂಡ ಬ್ರಿಟಿಷರಿಂದ ವಶಪಡಿಸಿಕೊಂಡಿತು. ಏಪ್ರಿಲ್ 6ರಂದು ಮಂಗಳೂರನ್ನು ಕೂಡ ಗೆಲ್ಲಲಾಯಿತು.
ಮೋಸದಿಂದ ಅಪ್ಪಯ್ಯಗೌಡರ ಬಂಧನ: ಸೋಲುಂಡ ಬ್ರಿಟಿಷರು ಸುಮ್ಮನೆ ಕೂರದೇ ಏಪ್ರಿಲ್ 16ಕ್ಕೆ ಕೇರಳದ ಕಣ್ಣನೂರಿಂದ ಮತ್ತೆ ತಮ್ಮ ಸೈನಿಕರನ್ನು ಕರೆಸಿಯಿಸಿಕೊಂಡು ಯುದ್ಧವನ್ನೇ ನಡೆಸಿದರು. ಆ ಹೋರಾಟದಲ್ಲಿ ಕೊಡಗು, ದಕ್ಷಿಣ ಕನ್ನಡದ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಅನೇಕ ಮಂದಿ ಹೋರಾಟಗಾರರು ಮಡಿದರು. ಈ ಸಂದರ್ಭ ಮೋಸದಿಂದ ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬಂಧಿಸಿದರು.
ಬ್ರಿಟಿಷರ ವಿರುದ್ಧ ದಂಗೆ ಏಳದಂತೆ ಭಯ: 1837 ಅಕ್ಟೋಬರ್ 31 ನಮ್ಮ ಹೋರಾಟಗಾರರಿಗೆ ದು:ಖದ ದಿನವಾಗಿತ್ತು. ಅಂದು ಬೆಳಗ್ಗೆ 10 ಗಂಟೆಗೆ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬ್ರಿಟಿಷರು ಮಡಿಕೇರಿ ಕೋಟೆ ಆವರಣದಲ್ಲಿ ಸಾರ್ವಜನಿಕವಾಗಿ ಗಲ್ಲಿಗೆ ಏರಿಸಿದರು. ಬ್ರಿಟಿಷರು ಅಂದು ಎಷ್ಟು ಕ್ರೂರತ್ವ ಮೆರೆದಿದ್ದರು ಎಂದರೆ ಅಪ್ಪಯ್ಯಗೌಡರನ್ನು ಗಲ್ಲಿಗೇರಿಸುವುದನ್ನು ನೋಡಲೇಬೇಕೆಂದು ಕೊಡಗಿನ ಎಲ್ಲ ಪಟೇಲರು, ರೈತರನ್ನು ಬರುವಂತೆ ಆಜ್ಞೆ ಮಾಡಿದರು. ಮುಂದೆ ಯಾರೂ ಬ್ರಿಟಿಷರ ವಿರುದ್ಧ ದಂಗೆ ಏಳದಂತೆ ಭಯ ಮೂಡಿಸಿದರು.
ಶ್ರದ್ಧಾಂಜಲಿ ಅರ್ಪಿಸಿ ಪುಷ್ಪನಮನ: ಇಂಥ ಕೊಡಗಿನ ವೀರ ಹೋರಾಟಗಾರನ ಸಾಹಸ ಮುಂದಿನ ಪೀಳಿಗೆಗೂ ಪ್ರೇರಣೆಯಾಗಬೇಕು ಎಂದು ಮಡಿಕೇರಿ ನಗರದ ಸುದರ್ಶನ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ವಿ ಸದಾನಂದ ಗೌಡರು ತಮ್ಮ ಆಡಳಿತಾವಧಿಯಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಪ್ರತಿವರ್ಷ ಅಕ್ಟೋಬರ್ 31ರಂದು ಈ ಸ್ವಾತಂತ್ರ ಹೋರಾಟಗಾರನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಪುಷ್ಪನಮನ ಸಲ್ಲಿಸಲಾಗುತ್ತದೆ. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಗಲ್ಲಿಗೇರಿಸಿದ ಕೋಟೆ ಆವರಣದ ಪ್ರದೇಶ ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಮಾತ್ರವಲ್ಲ, ಕೊಡಗಿನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನಾತ್ಮಕ ಸ್ಥಳವೂ ಇದಾಗಿದೆ.