ಕೊಡಗು : ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈಗಾಗಲೇ ನದಿ ಪಾತ್ರದ ಜನರಿಗೆ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಆದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸದೇ ನೋಟಿಸ್ ನೀಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಬರಡಿ ಮತ್ತು ಕುಂಬಾರಗುಂಡಿ ಗ್ರಾಮಗಳ ಜನರ ಬದುಕು ಶೋಚನೀಯವಾಗಿದೆ. 2019ರಲ್ಲಿ ಸುರಿದ ಭಾರೀ ಮಳೆಗೆ ಕಂಡು ಕೇಳರಿಯದಂತಹ ಪ್ರವಾಹ ಎದುರಾಗಿತ್ತು. ನೂರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದವು. ಬಳಿಕ ಸಂತ್ರಸ್ತರ ನಿರಂತರ ಹೋರಾಟದ ಫಲವಾಗಿ ಕೊನೆಗೂ ಜಿಲ್ಲಾಡಳಿತ ಮಡಿಕೇರಿ ತಾಲೂಕಿನ ಅಭ್ಯತ್ ಮಂಗಲ ಬಳಿ ನಿರಾಶ್ರಿತರಿಗೆ ಜಾಗಗಳನ್ನು ಗುರುತಿಸಿ ನಿವೇಶನ ಹಂಚಲು ಮುಂದಾಗಿತ್ತು. ಆದರೆ, ಇಂದಿಗೂ ನಿವೇಶನ ವಿತರಣೆ ಮಾಡಿಲ್ಲ.
ಇದೀಗ ಮತ್ತೆ ಪ್ರವಾಹ ಎದುರಾಗುತ್ತೆ ಎಂದು ಮನೆಗಳನ್ನು ಖಾಲಿ ಮಾಡುವಂತೆ ಕೆಲವು ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ. ನಮಗೂ ಮಕ್ಕಳು, ಮರಿ ಇವೆ ಪ್ರವಾಹ ಬಂದರೆ ಮತ್ತೆ ಸಂಕಷ್ಟದಲ್ಲಿ ಸಿಲುಕುವ ಆತಂಕವಿದೆ. ಸರ್ಕಾರ ನಮಗೂ ನಿವೇಶನ ಕೊಡಲಿ ಎಂದು ನಿರಾಶ್ರಿತರು ಆಗ್ರಹಿಸಿದ್ದಾರೆ.
ಕಳೆದ ಬಾರಿಯ ಪ್ರವಾಹದಲ್ಲಿ ಮನೆಗಳೆಲ್ಲಾ ಕೊಚ್ಚಿ ಹೋಗಿದ್ದವು. ಎಷ್ಟೋ ಮನೆಗಳು ಸಂಪೂರ್ಣ ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಿಲ್ಲದ ಸ್ಥಿತಿಯಲ್ಲಿವೆ. ಅವುಗಳಲ್ಲೇ ಇಂದಿಗೂ ಬದುಕುತ್ತಿದ್ದು, ಯಾವಾಗ ಬಿದ್ದು ಹೋಗುತ್ತವೆಯೋ ಅನ್ನೋ ಆತಂಕದಲ್ಲಿ ಕಾಲ ದೂಡುತ್ತಿದ್ದೇವೆ. ಆದರೆ, ಜಿಲ್ಲಾಡಳಿತ ಮಾತ್ರ ಇದ್ಯಾವುದನ್ನೂ ಗಮನಿಸದೆ ಕೇವಲ ಮನೆ ಖಾಲಿ ಮಾಡುವಂತೆ ನೋಡಿ ನೀಡಿರುವುದಕ್ಕೆ ಪಂಚಾಯತ್ ಎದುರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.