ಕೊಡಗು: ಮಹಿಳೆಯೊಬ್ಬಳು ತನ್ನ ಮಗಳೊಂದಿಗೆ ಸೇರಿಕೊಂಡು ತನ್ನ ಮೈದುನನ್ನೇ ಕೊಲೆ ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಳೆಕೂಡಿಗೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಶಿವು (38) ಮೃತ. ಈತನ ಅತ್ತಿಗೆ ಯಶೋಧ (42) ಹಾಗೂ ಆಕೆಯ ಮಗಳಾದ ಹರಿಣಿ (20) ಬಂಧಿತ ಆರೋಪಿಗಳು. ಮೃತ ಶಿವು ಹಾಗೂ ಆತನ ಚಿಕ್ಕಮ್ಮ, ಲಕ್ಷ್ಮಮ್ಮ ಮತ್ತು ಅತ್ತಿಗೆ, ಯಶೋಧ ಮತ್ತು ಯಶೋಧಾಳ ಮಗಳಾದ ಹರಿಣಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶಿವು ಮನೆಯ ಭೋಗ್ಯದ ಹಣದ ವಿಚಾರವಾಗಿ ಒಂದು ಲಕ್ಷ ಹಣವನ್ನು ತನ್ನ ಅತ್ತಿಗೆ ಯಶೋಧಾಳ ಬಳಿ ಕೇಳಿದ್ದಾನೆ. ಇದಕ್ಕೆ ಕೋಪಗೊಂಡ ಯಶೋಧ ಮತ್ತು ಆಕೆಯ ಮಗಳಾದ ಹರಿಣಿ, ದೀಪದ ಕಂಬ ದಿಂದ ಶಿವು ತಲೆಗೆ ಹೊಡೆದಿದ್ದಾರೆ. ತಲೆಗೆ ಬಲವಾದ ಏಟುಬಿದ್ದ ಪರಿಣಾಮ ಶಿವು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಇನ್ನು, ಅಕ್ಕಪಕ್ಕದ ನಿವಾಸಿಗಳು ಕೊಲೆ ಮಾಡಿದ ಯಶೋಧ ಹಾಗೂ ಹರಿಣಿಯನ್ನು ನಮ್ಮ ಕಣ್ಣಮುಂದೆಯೇ ಬಂಧಿಸಬೇಕೆಂದು ಪಟ್ಟುಹಿಡಿದು ಮೃತದೇಹವನ್ನು ರಸ್ತೆಯಲ್ಲಿಟ್ಟು, ಪ್ರತಿಭಟನೆಗೆ ಮುಂದಾದರು. ಕೂಡಲೇ ಸ್ಥಳಕ್ಕಾಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ್, ಮೃತ ಶಿವು ಬಗ್ಗೆ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆದಷ್ಟು ಬೇಗ ಕೃತ್ಯ ಎಸಗಿದವರನ್ನು ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸುವುದಾಗಿ ಭರವಸೆ ನೀಡಿದರು.