ಕೊಡಗು: ಕುಟುಂಬ ಕಲಹ ಹಿನ್ನೆಲೆಯಲ್ಲಿ ಮಾವನ ಮೇಲೆ ಸೊಸೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೆ.ಎ ಮಂದಣ್ಣ (73) ಕೊಲೆಯಾದ ವ್ಯಕ್ತಿ. ಸೊಸೆ ನೀಲಮ್ಮ ಕೊಲೆ ಮಾಡಿದ ಮಹಿಳೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಕಿಕ್ಕರಳ್ಳಿಯಲ್ಲಿ ಸೋಮವಾರ ಘಟನೆ ನಡೆದಿದೆ. ಮಾವನನ್ನು ಕೊಲೆ ಮಾಡಿದ ಸೊಸೆ ನೀಲಮ್ಮಳನ್ನು ಸೋಮವಾರ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ಗುಂಡು ಹಾರಿಸಿ ಕೊಲೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ವಿರಾಜಪೇಟೆ ಭಾಗದಲ್ಲಿ ಗುಂಡಿನ ಶಬ್ಧ ಕೇಳಿತ್ತು. ಈಗ ಸೋಮವಾರ ಪೇಟೆ ಭಾಗದಲ್ಲಿ ನಡೆದಿದೆ. ಮಾವ ಮತ್ತು ಸೊಸೆ ನಡುವೆ ಕೌಟುಂಬಿಕ ಕಾರಣಕ್ಕೆ ಗಲಾಟೆ ನಡೆದಿದ್ದು, ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮಗನಿಗೆ ಮದುವೆ ಮಾಡಿದರೆ ಮಗನನ್ನು ಜೊತೆಗೆ ನನ್ನನ್ನೂ ಚೆನ್ನಾಗಿ ನೋಡಿಕೊಳ್ಳತ್ತಾಳೆ ಎಂದು ಎರಡು ವರ್ಷಗಳ ಹಿಂದೆ ಕೆ ಎ ಮಂದಣ್ಣ ಮಗನಿಗೆ ನೀಲಮ್ಮಳನ್ನು ಮದುವೆ ಮಾಡಿಸಿದ್ದರು.
ಆದರೆ, ವಿವಾಹವಾಗಿ ಒಂದು ವರ್ಷದ ಕಳೆಯುತ್ತಿದ್ದಂತೆ ಮನೆಯಲ್ಲಿ ಕೌಟುಂಬಿಕ ಜಗಳ ಪ್ರಾರಂಭಗೊಂಡಿದೆ. ನಿರಂತರವಾಗಿ ನಡೆಯುತ್ತಿದ್ದ ಕೌಟುಂಬಿಕ ಜಗಳದಿಂದಾಗಿ ಮಾವ, ಗಂಡ ಹೆಂಡತಿಗಾಗಿ ಮಾಡಿದ್ದ ಮನೆಯಲ್ಲಿ ಒಂದು ಕೊಠಡಿಯಲ್ಲಿ ವಾಸವಾಗಿದ್ದರು. ಆದರೂ ಮಾವ ಮತ್ತು ಸೊಸೆ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು. ಗಲಾಟೆ ನಡೆದಾಗಲೆಲ್ಲಾ ಅಕ್ಕಪಕ್ಕದವರು ಬಂದು ಇಬ್ಬರಿಗೂ ಸಮಾಧಾನ ಮಾಡಿ ಹೋಗುತ್ತಿದ್ದರು. ಆದರೆ, ಗಲಾಟೆ ಆ ಕ್ಷಣಕ್ಕೆ ಕಡಿಮೆಯಾಗುತ್ತಿತ್ತೇ ಹೊರತು, ಮತ್ತದೇ ವೈಮನಸ್ಸು ಮುಂದುವರಿಯುತ್ತಿತ್ತು ಎನ್ನಲಾಗಿದೆ.
ಮಾವ ಹಾಗೂ ಸೊಸೆ ಬೇರೆ ಬೇರೆ ಮನೆಯಲ್ಲಿದ್ದಾಗ ಗಲಾಟೆ ಕಡಿಮೆಯಾಗಬೇಕಿತ್ತು. ಆದರೆ, ಈ ಗಲಾಟೆ ಮುಂದುವರಿದೇ ಇತ್ತು. ಸೊಸೆ ಜಗಳವಾದರೂ ಕೆ ಎ ಮಂದಣ್ಣ ಅವರು ಮಾತ್ರ ತಮ್ಮ ಮೊಮ್ಮಗನ ಮೇಲೆ ಪ್ರೀತಿ ತೋರಿಸುತ್ತಿದ್ದರು. ಇದು ಸೊಸೆಗೆ ಕೋಪ ತರಿಸುತ್ತಿತ್ತು. ಹಾಗೆ ನಿನ್ನೆ ಮನೆಯಲ್ಲಿ ಮೊಮ್ಮಗನ ಜೊತೆ ಮಾತನಾಡಿದ ವಿಷಯಕ್ಕೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿದೆ. ಆಗ ನೀಲಮ್ಮ ಮಾವ ಮಂದಣ್ಣನ ಮೇಲೆ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾಳೆ ಎನ್ನಲಾಗಿದೆ.
ಈ ಗುಂಡು ಮಾವನ ದೇಹವನ್ನು ಸೀಳಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಮಾವ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಸೊಸೆ ನೋಡದೆ ಹೊರಗೆ ಹೋಗಿದ್ದಾಳೆ. ಪ್ರಕರಣ ತಿಳಿಯುತ್ತಿದ್ದ ಸ್ಥಳಕ್ಕಾಗಮಿಸಿದ ಸೋಮವಾರ ಪೇಟೆ ಪೊಲೀಸರು ಕೊಲೆ ಮಾಡಿದ ಆರೋಪಡಿ ನೀಲಮ್ಮಳನ್ನು ಬಂಧಿಸಿದ್ದಾರೆ.
ತಿಂಗಳ ಹಿಂದೆ ನಡೆದಿತ್ತು ಇದೇ ರೀತಿಯ ಕೊಲೆ: ಕಳೆದ ತಿಂಗಳು ಮಡಿಕೇರಿಯಲ್ಲಿ ಇದೇ ರೀತಿ ಕೌಟುಂಬಿಕ ಕಲಹ ಹಿನ್ನೆಲೆ ತಂದೆಯೇ ಮಗನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದ ತಂದೆ ಮಗನ ನಡುವೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿದ್ದವು. ಈ ರೀತಿಯ ಸಣ್ಣ ಪುಷ್ಷ ಜಗಳಗಳು ಒಂದು ದಿನ ಅತಿರೇಕವಾಗಿ, ಕೋಪಗೊಂಡ ತಂದೆ ಮನೆಯಲ್ಲಿದ್ದ ಬಂದೂಕಿಂದ ಮಗನ ಮೇಲೆ ಗುಂಡು ಹಾರಿಸಿದ್ದರು. ಗುಂಡು ಹಾರಿಸಿದ ನಂತರ ಮಡಿಕೇರಿ ಪೊಲೀಸ್ ಠಾಣೆಗೆ ಬಂದು ತಾವು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ಮಲಗಿದ ಜಾಗದಲ್ಲೇ ಸಜೀವ ದಹನವಾದ ಬಿಎಂಟಿಸಿ ಕಂಡಕ್ಟರ್: ದುರಂತದ ಹಿಂದಿದೆ ಸಾಕಷ್ಟು ಗುಮಾನಿ