ಕೊಡಗು: ಆಹಾರ ಅರಸಿ ಬಂದ ಕಾಡಾನೆಯೊಂದು ಕೆರೆಯೊಂದರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಬಳಿ ನಡೆದಿದೆ. ಘಟನೆ ನಡೆದು ಒಂದೆರಡು ದಿನಗಳು ಆಗಿರಬಹುದೆಂದು ಶಂಕಿಸಲಾಗಿದೆ.
ಕಾಡಾನೆಗಳ ಆವಾಸ ತಾಣವಾಗಿರುವ ಗೋಣಿಕೊಪ್ಪಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆ ಮತ್ತು ಮಾನವ ಸಂಘರ್ಷ ನಡೆಯುತ್ತಲೇ ಇರುತ್ತವೆ. ಹೀಗೆ ಕಾಫಿ ತೋಟದ ಮಧ್ಯೆ ಇದ್ದ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಕೆರೆಗೆ ಇಳಿದ ಸಂದರ್ಭದಲ್ಲಿ ಕೆಸರಿನಲ್ಲಿ ಹೂತು ಹೋಗಿ ಮೇಲೇಳಲಾರದೆ ಅಲ್ಲೇ ಮೃತಪಟಿದೆ ಎಂದು ತಿಳಿದು ಬಂದಿದೆ.
ಆನೆ ನೀರಿಗಾಗಿ ಬೊಳ್ಳು ಎಂಬುವವರ ಕಾಫಿ ತೋಟದಲ್ಲಿ ಕೆಲವು ದಿನಗಳಿಂದ ಓಡಾಡುತ್ತಿರುವುದನ್ನು ಕಾರ್ಮಿಕರು ಗಮನಿಸಿದ್ದರು. ಮೃತ ಆನೆ ಅಂದಾಜು 6 ವರ್ಷದ್ದಾಗಿದ್ದು ತನ್ನ ಹಿಂಡಿನಿಂದ ಬೇರ್ಪಟ್ಟು ಆಹಾರ ಅರಸಿ ಬಂದಿರಬಹುದು. ಇಂದು ಬೆಳಗ್ಗೆ ಕಾರ್ಮಿಕರು ಕೆರೆಯ ಬಳಿ ತೆರಳಿದಾಗ ಮೃತದೇಹ ಪತ್ತೆಯಾಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.