ಕೊಡಗು : ಬಾಣಂತಿ ಆರೋಗ್ಯ ವಿಚಾರಿಸಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಪಾರಾಣೆ ಗ್ರಾಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಕೆ ಕೆ ಭವ್ಯಾ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿದೆ.
ಇತ್ತೀಚೆಗೆ ಹೆರಿಗೆ ಆಗಿದ್ದ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಲು ಪಾರಾಣೆ ಗ್ರಾಮದ ಮಾಚಯ್ಯ ಎಂಬುವರ ಮನೆಗೆ ತೆರಳಿದ್ದ ಸಮುದಾಯ ಆರೋಗ್ಯ ಸಿಬ್ಬಂದಿ, ಔಷಧ ಕೊಟ್ಟು ವಾಪಸ್ ಬರುವಾಗ ನಾಯಿ ದಾಳಿ ಮಾಡಿದೆ. ದೊಡ್ಡ ನಾಯಿ ಆಗಿರುವ ಕಾರಣ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೆಳಗೆ ಬಿದ್ದಾಗ ಭವ್ಯಾ ಅವರ ಕೈ ಸೇರಿದಂತೆ ದೇಹದ ಹಲವು ಭಾಗಗಳಿಗೆ ಕಚ್ಚಿ ಗಾಯಗೊಳಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮಗು ಮೇಲೆ ಬೀದಿ ನಾಯಿ ದಾಳಿ : ಮನೆ ಎದುರು ಆಟವಾಡುತ್ತಿದ್ದ ಮಗು ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಇದೇ ತಿಂಗಳ 12 ನೇ ತಾರೀಖಿನಂದು ನಡೆದಿತ್ತು. 17 ನೇ ವಾರ್ಡ್ನಲ್ಲಿ ಮನೆ ಮುಂದೆ ಐದಾರು ಮಕ್ಕಳು ಆಟವಾಡುತ್ತಿದ್ದಾಗ ನಾಲ್ಕು ವರ್ಷದ ಮಗುವಿನ ಮೇಲೆ ಏಕಾಏಕಿ ಬೀದಿ ನಾಯಿ ದಾಳಿ ನಡೆಸಿತ್ತು. ಪರಿಣಾಮ ಸುಪ್ರಿಯಾ ಎಂಬ ಮಗುವಿಗೆ ಗಂಭೀರವಾಗಿ ಗಾಯವಾಗಿತ್ತು.
ಇದನ್ನೂ ಓದಿ : ಮನೆ ಮುಂದೆ ಆಟ ಆಡುತ್ತಿದ್ದ ಮಗು ಮೇಲೆ ಬೀದಿನಾಯಿ ದಾಳಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಯಿ ದಾಳಿ ನಡೆಸಿದ ವೇಳೆ ಜೊತೆಗಿದ್ದ ಇತರ ಮಕ್ಕಳು ಕಿರುಚಾಡಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಮಗುವಿನ ಬಳಿ ಓಡಿ ಬಂದು ನಾಯಿಯಿಂದ ಪಾರು ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಬೀದಿ ನಾಯಿ ಮಗುವನ್ನು ಕಚ್ಚಿ ಗಾಯಗೊಳಿಸಿತ್ತು. ನಾಯಿ ದಾಳಿ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ : ಬೀದಿ ನಾಯಿ ಅಡ್ಡ ಬಂದು ಆಟೋ ರಿಕ್ಷಾ ಪಲ್ಟಿ : ಚಾಲಕ ದುರ್ಮರಣ
ಐವರಿಗೆ ಕಚ್ಚಿ ಗಾಯಗೊಳಿಸಿದ ನಾಯಿ : ಇನ್ನು ಶಾಲಾ ಮಕ್ಕಳ ಮೇಲೆ ಬೀದಿನಾಯಿ ದಾಳಿ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ನಡೆದಿತ್ತು. ನಾಲ್ವರು ವಿದ್ಯಾರ್ಥಿಗಳು ಸೇರಿ ಐವರಿಗೆ ನಾಯಿ ಕಚ್ಚಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ಮಕ್ಕಳು ಶಾಲೆಗೆ ಹೋಗುವಾಗ ಘಟನೆ ನಡೆದಿತ್ತು. ಘಟನೆ ಬಳಿಕ ಪಟ್ಟಣ ಪಂಚಾಯಿತಿಯಿಂದ ನಾಯಿ ಸೆರೆ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ, ಏಟು ತಿಂದ ನಾಯಿ ಮೃತಪಟ್ಟಿದೆ ಎಂದು ತಿಳಿದು ಬಂದಿತ್ತು.
ಇದನ್ನೂ ಓದಿ : ಧಾರವಾಡದಲ್ಲಿ ಶಾಲಾ ಮಕ್ಕಳು ಸೇರಿ ಐವರಿಗೆ ಕಚ್ಚಿ ಗಾಯಗೊಳಿಸಿದ ನಾಯಿ