ಕೊಡಗು: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಹುಲಿ ದಾಳಿಗೆ ಕಾಫಿ ತೋಟದಲ್ಲಿ ಮೇಯುತ್ತಿದ್ದ ಹಸು ಬಲಿಯಾಗಿದೆ.
ಕುತ್ತಿಗೆಯ ಭಾಗಕ್ಕೆ ಬಾಯಿ ಹಾಕಿ ಎಳೆದುಕೊಂಡು ಹೋಗುವ ವೇಳೆ ಹಸುವಿನ ಚೀರಾಟ ಕೇಳಿದ ಮಾಲೀಕ ಸ್ಥಳಕ್ಕೆ ಬರುತ್ತಿದ್ದಂತೆಯೇ ಹಸುವನ್ನು ಬಿಟ್ಟು ಹುಲಿ ಪರಾರಿಯಾಗಿದೆ. ಅಷ್ಟರಲ್ಲೇ ಹಸು ಅಸುನೀಗಿತ್ತು.
ಬೆಸಗೂರು ಪಕ್ಕದಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಹುಲಿ ಕಾಣಿಸಿಕೊಂಡಿದೆ. ಇದರಿಂದ ಭಯದಲ್ಲಿದ್ದ ಜನರು ಸಂಜೆ ವೇಳೆಗೆ ಹಸು ಬಲಿಯಾಗಿರುವುದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು. ಈ ಘಟನೆ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ತಿಂಗಳ ಹಿಂದಷ್ಟೇ ಪೊನ್ನಂಪೇಟೆ ಭಾಗದಲ್ಲಿ ಹುಲಿ ದಾಳಿಗೆ 3 ಜನರು ಮತ್ತು 10ಕ್ಕೂ ಹೆಚ್ಚು ಹಸುಗಳು ಬಲಿಯಾಗಿದ್ದವು. ಸದ್ಯ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟಿದ್ದು, ಬೆಸಗೂರು ಸುತ್ತಮುತ್ತಲಿನ ಗ್ರಾಮದವರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.