ಕೊಡಗು : ಜಿಲ್ಲೆಯಲ್ಲಿ ಕೋವಿಡ್ ಮತ್ತು ಓಮಿಕ್ರಾನ್ ನಿಂದ ಜನರು ತಪ್ಪಿಸಿ ಕೊಳ್ಳಲು ಪರದಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್ ಏರಿಕೆಯಾಗುತ್ತಿದ್ದು, ಇದರ ನಡುವೆ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡಾ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಕೊಡಗಿನ ಪ್ರವಾಸಿತಾಣಗಳತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಾದ ರಾಜಾಸೀಟು, ದುಬಾರೆ ಆನೆ ಶಿಬಿರ, ನಿಸರ್ಗಧಾಮದಲ್ಲಿ ವೀಕೆಂಡ್ ಬಂದ್ರೆ ಸಾಕು ಪ್ರಾವಾಸಿಗರ ದಂಡೆ ಹರಿದು ಬರುತ್ತಿದ್ದು, ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೇ ಕೋವಿಡ್ ಪ್ರಮಾಣ ಕೊಂಚ ನಿಯಂತ್ರಣಕ್ಕೆ ಬಂದಿದ್ದು, ಪ್ರವಾಸಿಗರು ಹೆಚ್ಚಾಗುತ್ತಿರುವ ಕಾರಣ ಮತ್ತೇ ಕೊರೊನಾ ಸೋಂಕು ಹೆಚ್ಚಾಗಲಿದೆಯಾ ಎನ್ನುವ ಆತಂಕ ಕಾಡಿದ್ದು, ಇದರ ಮಧ್ಯೆ ಈಗ ಒಮಿಕ್ರಾನ್ ಭಯ ಕೂಡಾ ಶುರುವಾಗಿದೆ.
ಹಾಗೇ ಇನ್ನೇನು ಇಯರ್ ಎಂಡಿಂಗ್ನಲ್ಲಿ ಜಿಲ್ಲೆಯಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಾರೆ. ಕೊಡಗು ಮೊದಲೇ ಜಲಪ್ರಳಯದಿಂದ ಜನ ಜೀವನ ಅತಂತ್ರವಾಗಿತ್ತು. ನಂತರ ಮೊದಲ ಹಂತದ ಕೋವಿಡ್ ಹೊಡೆತಕ್ಕೆ ಜನ ತತ್ತರ ಗೊಂಡಿದ್ದರು.
ಈಗ ಕೋವಿಡ್ ಕಡಿಮೆಯಾಗಿದ್ದು, ರೂಪಾಂತರಿ ವೈರಸ್ ಕಾಣಿಸಿಕೊಳ್ಳುತ್ತಿದ್ದು, ಜನ ಎಚ್ಚರಿಕೆಯಿಂದ ಇರಬೇಕು. ಜಿಲ್ಲೆಗೆ ಹೊರಗಿನಿಂದ ಬರುವ ಪ್ರವಾಸಿಗರ ಕುರಿತು ಜಿಲ್ಲಾಡಳಿತ ಕೂಡ ಕೊಂಚ ಎಚ್ಚರ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲೆ ನೆರೆಯ ಕೇರಳ ರಾಜ್ಯದೊಂದಿಗೆ ಗಡಿಯನ್ನ ಹಂಚಿ ಕೊಂಡಿದೆ. ಕುಟ್ಟ, ಮಾಕುಟ್ಟ ಹಾಗೂ ಕರಿಕೆ ಎಂಬ ಮೂರು ಗಡಿಯನ್ನ ಹೊಂದಿಕೊಂಡಿದೆ. ಕೇರಳದಿಂದ ಹೆಚ್ಚಾಗಿ ಕೊಡಗಿಗೆ ಜನ ಆಗಮಿಸುತ್ತಾರೆ. ಇವರ ಕುರಿತು ಕೊಡಗು ಜಿಲ್ಲಾಡಳಿತ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಜಿಲ್ಲೆಗೆ ಆಗಮಿಸೋರ ಕುರಿತು ಕ್ರಮ ವಹಿಸಲಾಗುತ್ತಿದೆ.
ಆದರೆ, ಕರ್ನಾಟಕದ ಒಳಗಿನಿಂದ ಆಗಮಿಸೋರ ಕುರಿತು ಜಿಲ್ಲಾಡಳಿತ ಕೊಂಚ ಎಚ್ಚರ ವಹಿಸಬೇಕು. ಈಗಾಗಲೇ ಕರ್ನಾಟಕಕ್ಕೂ ರೂಪಾಂತರಿ ವೈರಸ್ ಭೀತಿ ಎದುರಾಗಿದ್ದು, ಇದರಿಂದ ಜಿಲ್ಲೆಗೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ : ಹಸಿರು ಸೀರೆ ಉಟ್ಟು ಮಲ್ಲಿಗೆ ಮುಡಿದ 'ಸೀತಾ': ಅಲಿಯಾ ಭಟ್ ಸಾಂಪ್ರದಾಯಿಕ ಲುಕ್ಗೆ ಫ್ಯಾನ್ಸ್ ಫಿದಾ