ಮಡಿಕೇರಿ: ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ ಸೋಂಕಿನ ಲಕ್ಷಣಗಳು ಪತ್ತೆಯಾಗಿರುವ ಹಿನ್ನೆಲೆ ಆ ವ್ಯಕ್ತಿಗೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದುಬೈನಿಂದ ಬಂದ 30 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ. ಗಂಟಲು ಕೆರೆತ, ಶೀತ, ಜ್ವರ ಕಾಣಿಸಿಕೊಂಡಿರುವುದರಿಂದ ಆ ವ್ಯಕ್ತಿ ಆಸ್ಪತ್ರೆಗೆ ತೋರಿಸಲು ಬಂದಿದ್ದರು. ಹೀಗೆ ಬಂದ ಆ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೆ ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಮೈಸೂರಿಗೆ ರವಾನಿಸಲಾಗಿದೆ. ದುಬೈನಿಂದ ಬಂದಿದ್ದರಿಂದ ಆತನನ್ನು ಕೊರೊನಾ ಶಂಕಿತ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಳೆ ರಕ್ತ ಮಾದರಿಯ ವರದಿ ನಂತರ ವಾಸ್ತವ ಗೊತ್ತಾಗಲಿದೆ. ಕೊಡಗು ಮೂಲದ ವ್ಯಕ್ತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಕೆಲ ಕಾರಣಗಳಿಂದಾಗಿ ಕೊಡಗಿಗೆ ಮರಳಿದ್ದಾರೆ ಎನ್ನಲಾಗ್ತಿದೆ.