ಮಡಿಕೇರಿ: ಕೇರಳದಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಹೈಅಲರ್ಟ್ ಘೋಷಿಸಲಾಗಿದೆ.
ಕೇರಳ ಹಾಗೂ ಕೊಡಗು ಗಡಿಭಾಗವಾಗಿರೋದರಿಂದ ಜಿಲ್ಲೆಗೆ ಆನೇಕ ಮಂದಿ ಕೇರಳಿಗರು ಆಗಮಿಸುತ್ತಾರೆ. ಹಾಗಾಗಿ ಇಲ್ಲೂ ಮುನ್ನೆಚರಿಕಾ ಕ್ರಮವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕೇರಳದಲ್ಲಿ ಈಗಾಗಲೇ ಮೂವರಲ್ಲಿ ಕೊರೊನಾ ವೈರಸ್ ಕಂಡು ಬಂದಿರುವ ಹಿನ್ನೆಲೆ ಕೊಡಗಿನಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.
ಜಿಲ್ಲೆಯಲ್ಲಿ ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಪ್ರತ್ಯೇಕವಾದ ವಾರ್ಡ್ ತೆರೆಯಲಾಗಿದೆ. ಮಡಿಕೇರಿಯ ಜಿಲ್ಲಾಸ್ಪತ್ರೆಯ ಮೂರನೇ ಮಹಡಿಯಲ್ಲಿ 9 ಬೆಡ್ನ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ತಾಲೂಕು ಆಸ್ಪತ್ರೆಯಲ್ಲೂ ಎರಡು ಬೆಡ್ನ ವಾರ್ಡ್ ಈಗಾಗಲೇ ಆರಂಭಿಸಲಾಗಿದೆ. ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಶಂಕಿತ ಪ್ರಕರಣಗಳು ಕಂಡುಬಂದಿಲ್ಲ. ಹಾಗಾಗಿ ಜಿಲ್ಲೆಯ ಜನತೆ ಈ ಸೋಂಕಿನ ಬಗ್ಗೆ ಯಾವುದೇ ಆತಂಕ ಪಡುವಂತಿಲ್ಲ ಎಂದು ತಿಳಿಸಿದ್ದಾರೆ.