ಕೊಡಗು: ಕಾರ್ಗಿಲ್ ವಿಜಯೋತ್ಸವದ ದಿನ ಸೈನಿಕನ ಹತ್ಯೆಗೆ ಸಂಚು ರೂಪಿಸಿ, ರಸ್ತೆಯಲ್ಲಿ ಅಡ್ಡಲಾಗಿ ವಾಹನ ಡಿಕ್ಕಿ ಹೊಡೆಸಿ ಹಲ್ಲೆ ಮಾಡಿದ್ದು, ಸೈನಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶಾಂತಿಪ್ರಿಯ ಜಿಲ್ಲೆಯಲ್ಲಿ ನಡೆದ ಈ ಘಟನೆಯಿಂದ ಈಗ ಅಶಾಂತಿ ಮೂಡಿದೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತದಲ್ಲಿ ಈ ಸಂಬಂಧ ಪ್ರತಿಭಟನೆ ನಡೆಸಲಾಗುತ್ತಿದೆ. ಮಡಿಕೇರಿ ಸಮೀಪದ ಬೊಯಿಕೇರಿ ಬಳಿ ಕಳೆದ 25 ನೇ ತಾರೀಖಿನಂದು ನಡೆದ ಯೋಧನ ಕುಟುಂಬದ ಮೇಲಿನ ಹಲ್ಲೆಯನ್ನು ಖಂಡಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾಜಿ ಸೈನಿಕರ ಸಂಘ ಹಾಗೂ ಹಿಂದೂ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ರು.
ಬೆಳಗೆ 10 ಗಂಟೆಯಿಂದಲೂ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕಾಗಮಿಸದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತಷ್ಟು ಆಕ್ರೋಶ ಹೊರ ಹಾಕಿದ್ರು. ಸತತ ಮೂರು ಗಂಟೆಯ ಬಳಿಕ ಸ್ಥಳಕೆ ಆಗಮಿಸಿದ ಅಧಿಕಾರಿಗಳ ಹಾಗೂ ಕೊಡಗು ಎಸ್ಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಲ್ಲದೆ, ತಡವಾಗಿ ಬಂದ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಅರೋಪಿಗಳ ವಿರುದ್ಧ ಈಗಾಗಲೇ ಕ್ರಮ ಜರುಗಿಸಲಾಗಿದೆ. 5 ಅರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಇದರ ಕುರಿತು ಮತ್ತಷ್ಟು ತನಿಖೆ ನಡೆಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ವೇಳೆ ಪ್ರತಿಭಟನಾಕಾರರಿಗೆ ತಿಳಿಸಿದರು.