ಕೊಡಗು: ರಾಹುಲ್ ಗಾಂಧಿಯನ್ನು ಇಡಿ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಪ್ರತಿಭಟಿಸುವ ಯಾವ ನೈತಿಕತೆಯೂ ಕಾಂಗ್ರೆಸ್‌ಗೆ ಇಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಸೋಮವಾರಪೇಟೆಯ ಒಕ್ಕಲಿಗ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಎಸ್.ಐ.ಟಿ ವಿಚಾರಣೆಗೆ ಒಳಪಡಿಸಿತ್ತು. ಬಿಜೆಪಿ ಪಕ್ಷದವರು ಪ್ರತಿಭಟನೆ ಮಾಡಿದ್ದಾರಾ? ಈಗ ಯಾಕೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಅಲ್ಲದೆ ಅಮಿತ್ ಶಾ ಅವರನ್ನು ಜೈಲಿಗೆ ಕಳುಹಿಸಲು ಯತ್ನಿಸಿದ ಸಂದರ್ಭದಲ್ಲೂ ಬಿಜೆಪಿ ಏನೂ ಮಾತನಾಡಿಲ್ಲ. ಈಗ ಕಾಂಗ್ರೆಸ್ಸಿಗರು ಯಾವ ನೈತಿಕತೆಯ ಮೇಲೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರವನ್ನು ಪ್ರಶ್ನೆ ಮಾಡೋದೆ ತಪ್ಪಾ ಎಂದು ಪ್ರತಿಕ್ರಿಯಿಸಿದರು.
ಭ್ರಷ್ಟಾಚಾರ ಪ್ರಜಾಪ್ರಭುತ್ವದ ಭಾಗ ಎನ್ನುವುದಾದರೆ ಅದು ಪ್ರಜಾಪ್ರಭುತ್ವದ ಹರಣ ಅಲ್ಲವೇ?. ಕಾಂಗ್ರೆಸ್ ಪಕ್ಷವನ್ನು ಜನತೆ ಎಲ್ಲಾ ಕಡೆಗಳಲ್ಲೂ ನಿರ್ಲಕ್ಷ್ಯ ಮಾಡಿದ್ದಾರೆ. ಉಳಿದಿರೋದು ಒಂದೇ ಒಂದು ಕಡೆ ಅದು ರಾಜಸ್ಥಾನ. ಅಲ್ಲಿಯೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ಆಚೆಗಟ್ಟುತ್ತಾರೆ. ಆ ಮೂಲಕ ದೇಶಾದ್ಯಂತ ಯಾವ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇರೋದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಆಧುನಿಕ ಯಾತ್ರಾಸ್ಥಳವಾಗಲಿದೆ ರಾಜಾಧಿರಾಜ ಗೋವಿಂದ ದೇವಸ್ಥಾನ: ರಾಷ್ಟ್ರಪತಿ ಕೋವಿಂದ್