ಮಡಿಕೇರಿ: ಚೆಸ್ಕಾಂನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಸೌಮ್ಯ ಮೃತರು. ತಾಯಿ ಎಇಒ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ವಿವರ: "ಮಗಳು ಸೌಮ್ಯಳನ್ನು 15 ವರ್ಷಗಳ ಹಿಂದೆ ಕಗ್ಗೋಡ್ಲು ಗ್ರಾಮದ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಬಿ.ಕೆ.ಅರುಣ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದೆ. ಅನ್ಯೋನ್ಯವಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಕೆ ಕಳೆದ 2022 ಮೇ ತಿಂಗಳಿನಿಂದ ಮಡಿಕೇರಿಯ ಚೆಸ್ಕಾಂ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಸಂದರ್ಭದಲ್ಲಿ ಇಲಾಖೆಯ ಮೇಲಾಧಿಕಾರಿ ವಿನಯ್ ವಿನಾಕಾರಣ ಕಿರುಕುಳ ನೀಡಿ ನನ್ನ ಮಗಳಿಗೆ ಕರೆ ಮಾಡು ಮತ್ತು ಸಂದೇಶಗಳನ್ನು ಕಳುಹಿಸು ಎಂದು ಪೀಡಿಸುತ್ತಿದ್ದರು."
"ಇದಕ್ಕೆ ನನ್ನ ಮಗಳು ಹಲವಾರು ಬಾರಿ ನಿರಾಕರಿಸಿ ತನ್ನ ಕೆಲಸಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂದು ಹೆದರಿ ಈ ವಿಷಯವನ್ನು ಮುಚ್ಚಿಟ್ಟಿದ್ದಾಳೆ. ಆ ನಂತರ ವಿಷಯ ಗಂಡನಿಗೆ ತಿಳಿದು ಫೆ. 23, 2023 ರಂದು ಮಡಿಕೇರಿಯ ಮಹಿಳಾ ಠಾಣೆಗೆ ದೂರು ಕೊಟ್ಟಿದ್ದಾರೆ. ಚೆಸ್ಕಾಂ ಅಧಿಕಾರಿ ವಿನಯ್ ಅವರನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ನೊಂದ ಸೌಮ್ಯ ಸಂಜೆ ತನ್ನ ಗಂಡನ ಮನೆ ಕಗ್ಗೋಡ್ಲುವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಿ ಪುನಃ ಮಡಿಕೇರಿಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾ.12ರ ಬೆಳಗ್ಗೆ 5.30ಕ್ಕೆ ಮೃತಪಟ್ಟಿದ್ದಾಳೆ."
"ಅಧಿಕಾರಿಯ ಕಿರುಕುಳದಿಂದ ಮಗಳು ಸಾವನ್ನಪ್ಪಿದ್ದಾಳೆ. ವಿನಯ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು" ತಾಯಿ ಭವಾನಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ಧಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ: ಮತ್ತೊಂದೆಡೆ, ಆನೇಕಲ್ ಪಟ್ಟಣದ ಅಶ್ವತ್ಥ್ ನಾರಾಯಣ ಕುಟೀರದ ಬಳಿಯ ಡೊಮಿನೋಸ್ ಪಿಜ್ಜಾ ಸ್ಟೋರ್ ವ್ಯವಸ್ಥಾಪಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶ ಮದನಪಲ್ಲಿ ಮೂಲದ ಮಹೇಶ್(33) ಮೃತರು. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ:ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ