ಮಡಿಕೇರಿ : ಪ್ರವಾಸಿಗರ ಹಾಟ್ ಟೂರಿಸ್ಟ್ ಪ್ಲೇಸ್ ಅಂತಾನೆ ಕರೆಯುವ ರಾಜಾಸೀಟ್ನಲ್ಲಿ ಇದೀಗ ಕಾಫಿಯದ್ದೇ ಸುವಾಸನೆ ಎಲ್ಲೆಡೆ ಪಸರಿಸಿದೆ. ಜಿಲ್ಲಾಡಳಿತ, ಕಾಫಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಕೊಡಗು ಕಾಫಿ ಮೇಳ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಮಾರುಕಟ್ಟೆ ಕಲ್ಪಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಈ ಕಾಫಿ ಮೇಳದ ಉದ್ದೇಶವಾಗಿದೆ.
ರಾಜಸೀಟ್ನಲ್ಲಿ ಎಲ್ಲಿ ನೋಡಿದರೂ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ ಕಾಣಸಿಗುತ್ತೆ. ಜೊತೆಗೆ ತುಂತುರು ಮಳೆ ಹನಿ ಸುರಿಯುತ್ತಿದ್ದು, ಮೈ ನಡುಗಿಸುವ ಚಳಿ ಹೆಚ್ಚಾಗಿದೆ. ಮುಂಜಾನೆಯ ಚುಮು ಚುಮು ಚಳಿಗೆ ಒಂದು ಕಪ್ ಕಾಫಿ ಕುಡಿದರೇ ಸಾಕು ಮೈಂಡ್ ಫ್ರೆಶ್ ಆಗುತ್ತೆ. ಇನ್ನು, ಕಾಫಿ ಬೆಳೆಯೋ ನಾಡಿನಲ್ಲಿ ಇದೀಗ ಕಾಫಿ ಉತ್ಸವ ಸಂಭ್ರಮ ಆರಂಭವಾಗಿದ್ದು, ಪ್ರವಾಸಿ ತಾಣದ ಜೊತೆ ಕಾಫಿ ಮೇಳ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಮೇಳದಲ್ಲಿ ಪ್ರವಾಸಿಗರು ಕೂಡ ಕಾಫಿಯ ಸ್ವಾದವನ್ನು ಆಸ್ವಾಧಿಸುತ್ತ ಪ್ರವಾಸಿತಾಣದಲ್ಲಿ ಒಂದು ರೌಂಡ್ ಹಾಕಿ ಖುಷಿ ಪಡುತ್ತಿದ್ದಾರೆ. ಇನ್ನು, ಕೊಡಗು ಜಿಲ್ಲೆಯಲ್ಲಿ ಉತ್ಕೃಷ್ಟ ಕಾಫಿ ಬೆಳೆ ಬೆಳೆಯುತ್ತಿದ್ದು, ಕಾಫಿ ಬೆಳೆಯಿಂದ ಉತ್ಪಾದನೆ ಮತ್ತು ಮಾರಾಟ, ಕಾಫಿ ಬೀಜದಿಂದ ಚಿಕೋರಿ ಬಳಸಿ ಕಾಫಿ ಪುಡಿ ಮಾಡುವುದು ಹೇಗೆ ಎಂಬುದನ್ನು ಪ್ರವಾಸಿಗರಿಗೆ ತಿಳಿಸಿಕೊಡಲಾಯಿತು. ಬೆಟ್ಟಗಳ ಮೇಲೆ ನೂತನವಾಗಿ ನಿರ್ಮಾಣವಾದ ರಾಜಸೀಟಿನಲ್ಲಿ ಆಯೋಜಿಸಿದ್ದ ಈ ಮೇಳದಲ್ಲಿ ಕೊಡಗು, ಚಿಕ್ಕಮಗಳೂರು ಸೇರಿದಂತೆ ನಾನಾ ಭಾಗದಿಂದ ಆಗಮಿಸಿರುವ ಸುಮಾರು 22 ಮಳಿಗೆಗಳು ಭಾಗವಹಿಸಿವೆ.
ಮೇಳ ಆಯೋಜಿಸಿರುವುದರಿಂದ ಪ್ರವಾಸಿಗರಿಗೆ ತಮ್ಮ ಕಾಫಿ ಬ್ರಾಂಡ್ನ ಬಗೆ ತಿಳಿಸಿ ಯಾವೆಲ್ಲ ಸ್ವಾದದ ಕಾಫಿ ಇದೆ ಎಂಬುದರ ಬಗ್ಗೆ ಪರಿಚಯಿಸಲು ಸಾಧ್ಯವಾಗಿದೆ. ಹಾಗೂ ತಮ್ಮ ಪ್ರಾಡಕ್ಟ್ ಗಳ ಮಾರುಕಟ್ಟೆಗೆ ಕೂಡ ಇದೊಂದು ಉತ್ತಮ ಪ್ಲಾಟ್ ಫಾರ್ಮ್ ಆಗಿದೆ.
ಮೇಳದಲ್ಲಿ ಕಾಫಿಯಿಂದ ತಯಾರಿಸಿದ ವಿವಿಧ ಬಗೆಯ ವೈನ್, ಕೇಕ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಈ ರೀತಿಯ ಕಾಫಿ ಮೇಳ ಆಯೋಜನೆಗೊಂಡಿದ್ದು, ಕೊಡಗಿನ ಕಾಫಿ ಮೇಳಕ್ಕೆ ಪ್ರವಾಸಿಗರಿಂದ ಹಾಗೂ ಸ್ಥಳೀಯರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ :ಕಾಫಿ ಹೂಗಳು ಅರಳುವ ಸಮಯ.. ಕೊಡಗಿನಲ್ಲಿ ಶ್ವೇತಸುಂದರಿಯರ ಪರಿಮಳದ ಘಮಲು