ಕೊಡಗು/ಮಡಿಕೇರಿ: ಸುಮಾರು 90 ವರ್ಷಗಳ ಇತಿಹಾಸವಿರುವ ಸ್ಮಾರಕವೊಂದು ಮಂಜಿನ ನಗರಿ ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟ್ ಬಳಿ ಪತ್ತೆಯಾಗಿದೆ.
ಸ್ಮಾರಕ ಹಿನ್ನೆಲೆ: 1929ರ ನವೆಂಬರ್ 29 ರಂದು ಈ ಸ್ಮಾರಕ ನೆಲೆ ನಿಂತಿದೆ. ಈ ಜಾಗದಲ್ಲಿ ಸ್ವತಂತ್ರ ಪೂರ್ವ ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಇರ್ವಿನ್ ಕೊಡಗಿಗೆ ಭೇಟಿ ನೀಡಿ, ಇಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದ ಸ್ಥಳವಾಗಿದೆ. ಇರ್ವಿನ್ ಸ್ಮಾರಕವು ರಾಜಾಸೀಟ್ ಮತ್ತು ಗಾಂಧಿ ಮೈದಾನದ ನಡುವಿನ ಗುಡ್ಡದ ಮೇಲೆ ಪತ್ತೆಯಾಗಿದೆ.
ಕಾಡು ಪಾಲಾಗಿ ಹಲವು ವರ್ಷಗಳು ಕಳೆದಿರುವ ಪರಿಣಾಮ ಸ್ಮಾರಕದ ಬಗ್ಗೆ ಇಲ್ಲಿನ ಬಹುಪಾಲು ಸ್ಥಳೀಯರಿಗೆ ಮಾಹಿತಿ ಇಲ್ಲ. ಕೊಡಗಿನ ಇತಿಹಾಸ ತಿಳಿಸಲು ಪರಿಷ್ಕೃತಗೊಂಡಿರುವ 'ಕೊಡಗು ಗೆಜೆಟಿಯರ್' ಹಾಗೂ 'ಕೊಡಗಿನ ಇತಿಹಾಸ' ಪುಸ್ತಕವನ್ನು ತಿರುವಿ ಹಾಕಿದಾಗ ಲಾರ್ಡ್ ಇರ್ವಿನ್ ಇಲ್ಲಿಗೆ ಭೇಡಿ ನೀಡಿರುವ ನೆನಪಿಗಾಗಿ ಸ್ಮಾರಕ ನಿರ್ಮಾಣವಾಗಿದೆ ಎಂಬುದು ತಿಳಿದು ಬಂತು.
ಸ್ಮಾರಕಗಳು ವರ್ಷಗಳು ಉರುಳಿದಂತೆ ಆಂತರಿಕ ಹಾಗೂ ಬಾಹ್ಯ ಕಾರಣದಿಂದ ತನ್ನ ಸಮಸ್ಥಿತಿ ಕಳೆದುಕೊಳ್ಳುತ್ತಿವೆ. ಅವುಗಳ ಉಳಿಸುವ ಪ್ರಯತ್ನಕ್ಕೆ ಪುರಾತತ್ವ ಇಲಾಖೆ ಮುಂದಾಗಬೇಕಿದೆ ಎಂದು ತಜ್ಞರು ಒತ್ತಾಯಿಸುತ್ತಾರೆ. ಕಣ್ಣೆದುರಿನಲ್ಲಿಯೇ ಎಷ್ಟೋ ಸ್ಮಾರಕಗಳು ನಾಶವಾಗುತ್ತಿರುವುದು ಆತಂಕದ ಸಂಗತಿ. ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದು ತಜ್ಞರು ಹೇಳುತ್ತಾರೆ.
1940ರ ನಂತರ ಸ್ಮಾರಕಗಳ ಸಂರಕ್ಷಣಾ ಕಾರ್ಯ ಮಹತ್ವ ಪಡೆದುಕೊಂಡಿತ್ತು. ಅದು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ. ಸ್ಮಾರಕಗಳ ಸಂರಕ್ಷಣೆಗೆ ಜೀವ ತುಂಬಿ ಇತಿಹಾಸದ ಕುರುಹುಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.