ಮಡಿಕೇರಿ(ಕೊಡಗು): ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಬಂದೂಕು ನಿಂದ ಗುಂಡು ಹಾರಿಸಿ ಕೊಲೆ ಯತ್ನ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ. ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದು, ಬಳಿಕ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ನಡೆದಿದೆ.
ಕಳೆದ ಎರಡು-ಮೂರು ತಿಂಗಳಿನಿಂದ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು, ನಿನ್ನೆ ಇದು ತಾರಕಕ್ಕೆ ಏರಿ ಯುವಕನ ಮೇಲೆ ಗುಂಡು ಹಾರಿಸಿದ್ದ ಆರೋಪ ಕೇಳಿ ಬಂದಿದೆ. ಅಲ್ಲದೇ ಗುಂಡು ಹಾರಿಸಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಹೊಡೆದಾಟದಲ್ಲಿ ನಿಶ್ಚಲ್ ಎಂಬ ವ್ಯಕ್ತಿಯ ಕೈಮುರಿದಿದ್ದು, ತಲೆಗೂ ಗಂಭೀರ ಗಾಯಗಳಾಗಿದೆ. ಇದಕ್ಕೂ ಮೊದಲು ನಿಶ್ಚಲ್, ತೀರ್ಥ ಎಂಬಾತನ ಮೇಲೆ ಗನ್‌ನಿಂದ ಶೂಟ್ ಮಾಡಿದ ಆರೋಪ ಕೇಳಿ ಬಂದಿದೆ. ತೀರ್ಥ ಪಿಕ್ - ಅಪ್ ಚಲಾಯಿಸುತ್ತಿದ್ದ ವೇಳೆ ಗುಂಡು ಹಾರಿಸಿದ್ದರಿಂದ ವಾಹನಕ್ಕೆ ಬುಲೆಟ್ ತಗುಲಿದೆ. ಗುಂಡು ವಾಹನದ ಸೀಳಿದೆ. ಈ ಶೂಟೌಟ್ನಲ್ಲಿ ತೀರ್ಥನ ಕೈಗೆ ಗಾಯವಾಗಿದೆ.
ಬಿಳಿಗೇರಿ ಗ್ರಾಮದಲ್ಲಿ ಇರುವ ಸುಮಾರು 7 ಎಕರೆ ಕಾಫಿ ತೋಟವನ್ನು ನಿಶ್ಚಲ್ ಇತ್ತೀಚಿಗೆ ಖರೀದಿ ಮಾಡಿದ್ದ. ಆದರೆ, ಈ ಕಾಫಿ ತೋಟವನ್ನು ಕಳೆದ 30 ವರ್ಷಗಳಿಂದ ತೀರ್ಥ ಅವರ ತಂದೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ತೋಟದ ಜಾಗಕ್ಕೆ ದಾಖಲೆಗಳನ್ನು ಮಾಡಲು ಮುಂದಾಗಿದ್ದರು. ಆದರೆ, ತೋಟವನ್ನು ಬೇರೆ ಅವರ ಕೈಯಿಂದ ನಿಶ್ಚಲ್ ಖರೀದಿ ಮಾಡಿದ್ದ. ಈ ಪ್ರಕರಣ ಕಳೆದ 6 ತಿಂಗಳ ಹಿಂದೆಯೇ ಕೋರ್ಟ್ ಮೆಟ್ಟಿಲು ಏರಿತ್ತು.
ತೀರ್ಥ ಕಾಫಿ ತೋಟವನ್ನು ಬೇರೆಯವರಿಗೆ ಲೀಜ್ ನೀಡಿದ್ದ. ಇದನ್ನು ಪ್ರಶ್ನಿಸಲು ನಿಶ್ಚಲ್ ಸ್ಥಳಕ್ಕೆ ಹೋಗಿರುವಾಗ 2 ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಗುಂಡು ಹೊಡೆಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಯುವಕರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಪುಣೆ: ಕಾಲೇಜು ಆವರಣದಲ್ಲಿ ಮಾರಕಾಸ್ತ್ರಗಳಿಂದ ಜನರನ್ನು ಭಯಗೊಳಿಸಲು ಯತ್ನಿಸಿದ ದುಷ್ಕರ್ಮಿಗಳು