ಮಡಿಕೇರಿ (ಕೊಡಗು): ಕೊರೊನಾ ದೃಢಪಟ್ಟಿದ್ದ ಹಿನ್ನೆಲೆ ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ವೃದ್ಧೆಯನ್ನು ಆ್ಯಂಬುಲೆನ್ಸ್ ಚಾಲಕ ಅರ್ಧ ದಾರಿಯಲ್ಲೇ ಇಳಿಸಿ ಹೋಗಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ಭಾನುವಾರ ಸಂಜೆ ಬಿಡುಗಡೆಯಾದ ಪೊನ್ನಮ್ಮ (60) ಎಂಬ ವೃದ್ಧೆ 12 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಕೋವಿಡ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಆದರೆ ಆ್ಯಂಬುಲೆನ್ಸ್ ಚಾಲಕ ನಡು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾನೆ.
ಸೋಮವಾರಪೇಟೆ ತಾಲೂಕಿನ ಕಿರಗಂದೂರು ನಿವಾಸಿಯಾದ ಪೊನ್ನಮ್ಮ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು. ಸಂಜೆ ವೇಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರನ್ನು ಆ್ಯಂಬುಲೆನ್ಸ್ ಚಾಲಕ ಐಗೂರು ಗ್ರಾಮದ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ. ತನ್ನ ಊರಿನವರೆಗೆ ನಡೆಯಲಾಗದೇ ವೃದ್ಧೆ ಪರದಾಡಿದ್ದಾರೆ.
ನಂತರ ಇವರನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಘಟನೆ ಬಗ್ಗೆ ವಿವರಿಸಿದ್ದಾರೆ. ಸ್ಥಳೀಯರು ಮಾಹಿತಿ ಪಡೆದು ವೃದ್ಧೆಯನ್ನು ಮನೆಗೆ ಸೇರಿಸಿದ್ದಾರೆ. ಡಿಸ್ಚಾರ್ಜ್ ಮಾಡುತ್ತಿರುವ ಬಗ್ಗೆ ಮನೆಯರಿಗೆ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿಲ್ಲ. ಚಾಲಕನು ಕೂಡ ಯಾವುದೇ ಮಾಹಿತಿಯನ್ನು ಕೊಡದೆ ಆಸ್ಪತ್ರೆಯಿಂದ ಕರೆದುಕೊಂಡು ಬಂದಿದ್ದಾನೆ ಎನ್ನಲಾಗ್ತಿದೆ.
ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.