ದಕ್ಷಿಣ ಕನ್ನಡ/ಕೊಡಗು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಮತ್ತು ಕೊಡಗಿನಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜಿಲ್ಲೆಯ ಜನ ಭಯ ಭೀತರಾಗಿದ್ದಾರೆ. ಬೆಳಗ್ಗೆ 7.45 ರ ಸುಮಾರಿಗೆ 3.4 ಸೆಕೆಂಡುಗಳ ಕಾಲ ಭೂ ಕಂಪನದ ಅನುಭವವಾಗಿದ್ದು, ಜನರು ಮನೆಯಿಂದ ಹೊರ ಬಂದಿದ್ದಾರೆ. ಕೊಡಗಿನ ಕರಿಕೆ, ಪೆರಾಜೆ, ಭಾಗಮಂಡಲ, ಮಡಿಕೇರಿ, ನಾಪೋಕ್ಲು ಮತ್ತು ಸುಳ್ಯದ ಸಂಪಾಜೆ , ಗೂನಡ್ಕ, ಗುತ್ತಿಗಾರು ಸೇರಿದಂತೆ ಕೆಲವೆಡೆ ಭೂಕಂಪನ ಅನುಭವವಾಗಿದೆ.
ಕೊಡಗು ಜಿಲ್ಲೆಯಲ್ಲಿ ಎರಡು ಮೂರು ದಿನಗಳ ಅಂತರದಲ್ಲಿ 3ನೇ ಬಾರಿಗೆ ಭೂ ಕಂಪಿಸಿದ್ದು, ಬೆಟ್ಟಗುಡ್ಡಗಳಲ್ಲಿ ವಾಸಮಾಡುವ ಜಿಲ್ಲೆಯ ಜನತೆಯಲ್ಲಿ ಮತ್ತೆ ಆತಂಕ ಉಂಟಾಗಿದೆ. ಹಾಗೆಯೇ ಸುಳ್ಯದಲ್ಲಿ ಎರಡನೇ ಬಾರಿ ಈ ಅನುಭವ ಆಗಿದೆ. 6 ದಿನದ ಹಿಂದೆ ಸೋಮವಾರಪೇಟೆ ಭಾಗ ಮತ್ತು ಹಾಸಗ ಗಡಿ ಭಾಗದಲ್ಲಿ ಭೂ ಕಂಪನವಾಗಿದ್ರೆ ಎರಡು ದಿನಗಳ ಹಿಂದೆ ಸಂಪಾಜೆ ಭಾಗದಲ್ಲಿ ಭೂ ಕಂಪನವಾಗಿ ಮನೆಗಳಿಗೆ ಹಾನಿಯಾಗಿತ್ತು. ಇಂದು ಬೆಳಿಗ್ಗೆ ಭಾಗಮಂಡಲ ಸುತ್ತಮುತ್ತಲಿನ ಭಾಗದಲ್ಲಿ ಭೂಮಿ ಕಂಪಿಸಿದೆ.
ಸುಳ್ಯದಲ್ಲಿ ಭಾರೀ ವಿಚಿತ್ರ ಶಬ್ದದೊಂದಿಗೆ ಈ ಹಿಂದೆ ಸಂಭವಿಸಿದ ಭೂಕಂಪದ ಶಬ್ದಕಿಂತಲೂ ಹೆಚ್ಚಿನ ರೀತಿಯಲ್ಲಿ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಮನೆಯ ಮೇಲಿನ ರೂಪಿಂಗ್ ಶೀಟ್‌ಗಳು ಕಂಪಿಸಿವೆ.
ಇದನ್ನೂ ಓದಿ : ಸುಳ್ಯದಲ್ಲಿ 2.3 ಪರಿಮಾಣದಲ್ಲಿ ಭೂಕಂಪನ : ಕೆಎಸ್ಎನ್‌ಡಿಎಂಸಿ ಅಧಿಕೃತ ಮಾಹಿತಿ ಬಿಡುಗಡೆ
ಸುಳ್ಯದಲ್ಲಿ ಮೂರು ದಿನಗಳ ಹಿಂದೆ ಕೂಡಾ ಬೆಳಗ್ಗೆ ಭೂಮಿಯಿಂದ ವಿಚಿತ್ರ ಶಬ್ದ ಕೇಳಿ ಬಂದಿತ್ತಲ್ಲದೇ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿತ್ತು. ಅಂದು ಆ ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 2.3 ದಾಖಲಾಗಿತ್ತು.