ಕೊಡಗು: ಕೊಡಗಿನಲ್ಲಿ ಮತ್ತೆ ಕೂಲಿ ಕಾರ್ಮಿಕರ ಮೇಲೆ ಆನೆದಾಳಿ ನಡೆಸಿದೆ. ಜಿಲ್ಲೆಯ ಕಂಬಿಬಣೆ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡಿ ಬರುತ್ತಿದ್ದಾಗ ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಘಾಸಿಗೊಳಿಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮತ್ತೆ ಕಾಡಾನೆ ಹಾವಳಿಯಿಂದ ಸುತ್ತಮುತ್ತಲಿನ ಜನರು ಭಯದಲ್ಲಿ ಜೀವನ ಸಾಗಿಸುವಂತಾಗಿದೆ.
ಭೂತನಕಾಡು ಟಾಟಾ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ರಾಮಸ್ವಾಮಿ ಎಂಬುವವರು ಸಂಜೆ ವೃಂದಾವನ ತೋಟದಲ್ಲಿ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರನೇ ಕಾಡಾನೆ ಪ್ರತ್ಯಕ್ಷವಾಗಿದೆ. ರಾಮಸ್ವಾಮಿ ಅವರ ಮೇಲೆ ಎರಗಿ ನೆಲಕ್ಕೆ ಬೀಳಿಸಿ ಕಾಲನ್ನು ತುಳಿಯಲಾರಂಭಿಸಿದೆ.
ಅದೃಷ್ಟವಾಶಾತ್ ಅವರ ಹಿಂದೆ ಬರುತ್ತಿದ್ದ ತೋಟದ ರೈಟರ್ ಆನೆಯನ್ನು ಕಂಡು ಜೋರಾಗಿ ಬೊಬ್ಬಿಟ್ಟಿದ್ದಾರೆ. ಅವರ ಕಿರುಚಾಟಕ್ಕೆ ಕಾಡಾನೆ ರಾಮಸ್ವಾಮಿಯವರನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ. ತೋಟದ ರೈಟರ್ ಅವರಿಂದಾಗಿ ರಾಮಸ್ವಾಮಿ ಅವರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಡಗಿನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಕೊಡಗು ದಟ್ಟ ಕಾಡು ಪ್ರದೇಶವಾಗಿದ್ದು, ಇಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಆಗಾಗ್ಗೆ ನಡೆಯುತ್ತಿರುತ್ತದೆ.
ಹಿಂದಿನ ಕಾಡಾನೆ ದಾಳಿ ಪ್ರಕರಣಗಳು:
ದನ ಮೇಯಿಸಲು ಹೋಗಿದ್ದ ರೈತ ಕಾಡಾನೆಗೆ ಬಲಿ: ಮಾರ್ಚ್ ತಿಂಗಳಿನಲ್ಲಿ, ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ರೈತ ವೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದ ಬಳಿ ನಡೆದಿತ್ತು. ಸೊಳ್ಳೆಪುರ ದೊಡ್ಡಿ ನಿವಾಸಿ ಅಲಗಪ್ಪ( 50) ಮೃತನಾದ ರೈತನಾಗಿದ್ದು, ನಿತ್ಯ ದನಗಳನ್ನು ಮೇಯಿಸಲು ಕಾಡಿಗೆ ಹಲಗಪ್ಪ ಹೋಗುತ್ತಿದ್ದರು. ಈ ರೈತರ ಮೃತದೇಹ ಪತ್ತೆಯಾಗುವ ಮೂರು ದಿನದ ಹಿಂದೆ ಅವರು ಎಂದಿನಂತೆ ದನ ಮೇಯಿಸಲು ಹೋಗಿದ್ದರು. ಆದರೆ ತಾನು ಸಾಕಿದ್ದ ಹಸು ತಪ್ಪಿಸಿಕೊಂಡಿದ್ದರಿಂದ ಕಾಡಿನಲ್ಲಿ ಹುಡುಕಲೂ ಹೋಗಿದ್ದವನು, ಮನೆಗೆ ವಾಪಸ್ ಬಂದಿರಲಿಲ್ಲ. ಎರಡು ದಿನಗಳಿಂದ ಕುಟುಂಬದವರು ಹುಡುಕಾಟ ನಡೆಸಿದರೂ ಅಲಗಪ್ಪ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. 2 ದಿನದ ನಂತರ ಕಾಡಿನಲ್ಲಿ ಹಾರೋಹಳ್ಳಿ ಬೀಟ್ ಗುಲ್ಲೆಟ್ಟಿ ಕಾವಲ್ ಬಳಿ ರೈತನ ಮೃತದೇಹ ಅರಣ್ಯ ಇಲಾಖೆಯ ಸಿಬ್ಬಂದಿಗೆ ಪತ್ತೆಯಾಗಿತ್ತು. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಆಸ್ತಿ ವಿವಾದ: ಕೊಡಗಿನಲ್ಲಿ ಸಹೋದರರಿಂದಲೇ ಅಣ್ಣನ ಭೀಕರ ಹತ್ಯೆ