ಕೊಡಗು: ದೇವರಿಗೆ ಹಣ್ಣುಕಾಯಿ, ಚಿನ್ನಾಭರಣ, ನಗದು ಕಾಣಿಕೆ, ಸೀರೆ ಹೀಗೆ ಬಗೆ,ಬಗೆಯ ಹರಕೆಗಳನ್ನು ಸಲ್ಲಿಸುವುದನ್ನು ನೋಡಿದ್ದೇವೆ. ಆದರೆ ತಲೆಗೆ ಖಡ್ಗದಿಂದ ಗಾಯ ಮಾಡಿಕೊಂಡು ರಕ್ತ ಹರಿಸಿ ಹರಕೆ ಒಪ್ಪಿಸೋದನ್ನು ನೋಡಿದ್ದೀರಾ? ಆಶ್ಚರ್ಯ ಆಯ್ತಾ? ಇಂಥದ್ದೊಂದು ಆಚರಣೆ ಕೇರಳದಲ್ಲಿ ರೂಢಿಯಲ್ಲಿದೆ.
ಕೇರಳದ ಕೊಡುಗಂಲ್ಲೂರು ಭಗವತಿ ದೇವಿಯ ಭಕ್ತರು ಈ ರೀತಿ ಹರಕೆ ಒಪ್ಪಿಸುತ್ತಾರೆ. ಕೊಡಗು ಜಿಲ್ಲೆಯ ನೆಲ್ಯಹುದಿಕೇರಿಯಲ್ಲಿ ಕೂಡಾ ಕೊಡುಗಂಲ್ಲೂರು ಭಗವತಿ ದೇವಿಯ ಭಕ್ತ ಸಂಘವನ್ನು ಸ್ಥಾಪಿಸಿದ್ದು, 6 ನೇ ವಾರ್ಷಿಕೋತ್ಸವ ನಡೆಯಿತು. ವೈಭವೋಪೇತವಾಗಿ ನಡೆದ ವಾರ್ಷಿಕೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಈ ವೇಳೆ ಅರ್ಚಕರೊಬ್ಬರ ಮೇಲೆ ದೇವಿ ಆವಾಹನೆಯಾಗಿದ್ದು, ತನ್ನ ಕೈನಲ್ಲಿದ್ದ ವಿಶೇಷ ರೀತಿಯ ಖಡ್ಗದಿಂದ ನೆತ್ತಿ ಭಾಗಕ್ಕೆ ಚಚ್ಚಿ ಗಾಯ ಮಾಡಿಕೊಂಡು ರಕ್ತ ಹರಿಸಿದ್ದಾರೆ.
ರಕ್ತ ಸುರಿಯುತ್ತಿದ್ದರೂ ಆತನಿಗೆ ಮಾತ್ರ ಏನೂ ಆಗಿಲ್ಲ. ಭಕ್ತರು ಆತನ ಕೊರಳಿಗೆ ಹೂವಿನ ಹಾರ ಹಾಕಿ ತಮ್ಮ ಬೇಡಿಕೆ ಈಡೇರಿಕೆಗೆ ಪ್ರಾರ್ಥಿಸಿಕೊಂಡ್ರು. ತಲೆಗೆ ಗಾಯವಾದ್ರೂ ದೇವಿಯ ಶಕ್ತಿಯಿಂದ ಏನೂ ಆಗೋದಿಲ್ಲ ಅನ್ನೋದು ಭಕ್ತರ ನಂಬಿಕೆ.