ಕಲಬುರಗಿ : ಸಂಸದ ಉಮೇಶ್ ಜಾಧವ್ರನ್ನು ಯುವಕನೋರ್ವ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ಕೋನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.
ಸಂಸದ ಉಮೇಶ್ ಜಾಧವ್ ಭೀಮಾ ನದಿ ಪ್ರವಾಹಕ್ಕೆ ತುತ್ತಾಗಿರುವ ಕೋನಹಿಪ್ಪರಗಾ ಗ್ರಾಮದ ಮೂಲಕ ಹಾದು ಹೋಗುತ್ತಿದ್ದ ವೇಳೆ ಕಾರು ತಡೆದ ಯುವಕ, ತರಾಟೆಗೆ ತೆಗೆದುಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ. "ನಿಮಗೆ ಓಟು ಹಾಕಿ ಗೆಲ್ಲಿಸಿದ್ದೇವೆ, ನಾವು ಸಂಕಷ್ಟಕ್ಕೆ ಸಿಲುಕಿದಾಗ ನೀವೆಲ್ಲಿದ್ದಿರಿ. ಈಗ ಈ ಕಡೆ ಬಂದಿದ್ದೀರಾ" ಎಂದು ಜೋರು ಧ್ವನಿಯಲ್ಲೇ ಸಂಸದರನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಸಂಸದ ಜಾಧವ್ ಯಾವುದೇ ಉತ್ತರ ನೀಡದೆ ಮುಂದೆ ಸಾಗಿದ್ದಾರೆ.
ನಿನ್ನೆಯಷ್ಟೆ ಪ್ರವಾಹ ಪೀಡಿದ ಚಿತ್ತಾಪುರ ತಾಲೂಕಿನ ಮುತ್ಗಾ ಗ್ರಾಮಕ್ಕೆ ಹೋದಾಗ, ಅಲ್ಲಿಯೂ ಗ್ರಾಮಸ್ಥರು ಸಂಸದ ಜಾಧವ್ ಕಾರಿಗೆ ಘೇರಾವ್ ಹಾಕಿ ಪ್ರತಿಭಟಿಸಿದ್ದರು. ಆಗಲೂ ಸಂಸದರು ಕಾರಿನಿಂದ ಕೆಳಗಿಳಿಯದೆ ವಾಪಸಾಗಿದ್ದರು.