ಕಲಬುರಗಿ: ಇಂದಿನಿಂದ ಮೋಮಿನಪೂರ ಕಂಟೇನ್ಮೆಂಟ್ ಝೋನ್ ವ್ಯಾಪ್ತಿಯ ಬಡಾವಣೆಗಳಲ್ಲಿ ಕೊರೊನಾ ವೈರಸ್ ಪರೀಕ್ಷೆಗಾಗಿ ರ‍್ಯಾಂಡಮ್ ಸ್ಯಾಂಪಲ್ ಕಲೆಕ್ಟ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.
ಮೋಮಿನಪೂರ ಕಂಟೇನ್ಮೆಂಟ್ ಝೋನ್ ಸುತ್ತಮುತ್ತಲಿನ ಒಟ್ಟು ಮೂರು ಬಡಾವಣೆಗಳ ನಾಲ್ಕು ಸಾವಿರ ಮನೆಗಳಲ್ಲಿ ವಾಸವಿರುವ ಸುಮಾರು 20,000 ನಿವಾಸಿಗಳಿಂದ ರ‍್ಯಾಂಡಮ್ ಆಗಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗುವುದು. 60 ವರ್ಷ ಮೇಲ್ಪಟ್ಟವರು, ಹೈರಿಸ್ಕ್ ಇರುವ ಬಡಾವಣೆಗಳ ನಿವಾಸಿಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುವುದು. ಇನ್ನುಳಿದಂತೆ ಅನಾರೋಗ್ಯ ಪೀಡಿತರು ಮತ್ತು ಸ್ವಯಂ ಪ್ರೇರಿತರಾಗಿ ತಪಾಸಣೆಗೆ ಮುಂದೆ ಬರುವವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಇನ್ನು ಅಂತಾ ರಾಜ್ಯಗಳಿಂದ ಜಿಲ್ಲೆಗೆ ಬರುವವರ ತಪಾಸಣೆಗಾಗಿ ಗಡಿಯಲ್ಲಿ ಆರು ಚೆಕ್ ಪೋಸ್ಟ್ ತೆರೆಯಲಾಗಿದೆ. ನಿನ್ನೆ ಸಂಜೆವರೆಗೆ 12,025 ಜನ ವಲಸೆ ಕಾರ್ಮಿಕರು ಜಿಲ್ಲೆಗೆ ಬಂದಿದ್ದಾರೆ. ಇವರನ್ನು 294 ಕ್ವಾರಂಟೈನ್ ಕೇಂದ್ರದಲ್ಲಿ ನಿಗಾ ವಹಿಸಲಾಗುತ್ತಿದೆ. ಕಲಬುರಗಿ ನಗರವೊಂದರಲ್ಲೇ 9 ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ.
ಜಿಲ್ಲೆಯಲ್ಲಿ ಈ ಹಿಂದೆ ನಿತ್ಯ 300 ಕೋವಿಡ್-19 ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಈಗ ನಿತ್ಯ 800 ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸುವ ಸಾಮರ್ಥ್ಯಕ್ಕೆ ಹೆಚ್ಚಿಸಲಾಗಿದೆ. ಜಿಲ್ಲಾದ್ಯಂತ ಒಟ್ಟು 40 ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದ್ದು, ಎರಡು ಚೆಕ್ ಪೋಸ್ಟ್ ಸಂಪೂರ್ಣ ಬಂದ್ ಮಾಡಲಾಗಿದೆ. ಇಲ್ಲಿಂದ ಯಾರೂ ಒಳಬಾರದಂತೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ತಿಳಿಸಿದ್ದಾರೆ.