ಕಲಬುರಗಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮಹಿಳೆಯೋರ್ವಳು ಕೊಚ್ಚಿಕೊಂಡು ಹೋಗಿರುವ ಘಟನೆ ಆಳಂದ ತಾಲೂಕಿನ ತೀರ್ಥ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದ್ದು, 16 ಗಂಟೆಗಳ ನಂತರ ಶವ ಪತ್ತೆಯಾಗಿದೆ.
ಶ್ರೀದೇವಿ ಪೂಜಾರಿ (42) ಎಂಬುವರೆ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟ ಮಹಿಳೆ. ಶನಿವಾರ ಸಂಜೆ ಮಹಿಳೆ ತಮ್ಮ ಜಮೀನಿನಿಂದ ಮನೆಗೆ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿತ್ತು. ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಈ ವೇಳೆ ತೀರ್ಥ ಗ್ರಾಮದ ಹೊರವಲಯದಲ್ಲಿರುವ ಹಳ್ಳ ದಾಟಿಕೊಂಡು ಮನೆಗೆ ಹೋಗುವಾಗ ಶ್ರೀದೇವಿ ಕೊಚ್ಚಿಕೊಂಡು ಹೋಗಿದ್ದರು. ಮಹಿಳೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದು, 16 ಗಂಟೆ ಬಳಿಕ ಇಂದು ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಬಳಿಕ ಮತ್ತೆ ವರುಣ ಅಬ್ಬರಿಸುತ್ತಿದ್ದು, ಕಲಬುರಗಿ ಜಿಲ್ಲೆಯ ಜನ ಹೈರಾಣಾಗಿದ್ದಾರೆ. ಮಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಕೆಲವೆಡೆ ದವಸ ಧಾನ್ಯಗಳೆಲ್ಲ ನೀರುಪಾಲಾಗಿವೆ. ಕಳೆದ ಮೂರು ದಿನದಿಂದ ದಿನವಿಡೀ ಬಿಸಿಲಿನ ವಾತಾವರಣವಿದ್ದು, ಸಂಜೆಯಾಗುತ್ತಿದಂತೆ ಮಳೆ ಅಬ್ಬರಿಸುತ್ತದೆ. ಮಳೆಯಿಂದ ಬಿತ್ತಿರುವ ಬೆಳೆಯೂ ನಾಶವಾಗುವ ಭೀತಿ ರೈತರಲ್ಲಿ ಮೂಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ