ಕಲಬುರಗಿ: ಕಮಿಷನ್ ಕೇಳಿಲ್ಲ ಅಂದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೇವರ ಮೇಲೆ ಆಣೆ ಮಾಡಲಿ ಎಂಬ ಮಾಜಿ ಸಚಿವ ಆರ್.ಅಶೋಕ್ ಸವಾಲಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿ ಇಂದು ಮಾತನಾಡಿದ ಅವರು, ದೇವಸ್ಥಾನಕ್ಕೆ ಯಾಕೆ ಹೋಗ್ತೀರಾ? ದೇವಸ್ಥಾನಕ್ಕೆ ಹೋದ್ರೆ ನ್ಯಾಯ ಸಿಗುತ್ತಾ?, ದೇವಸ್ಥಾನಕ್ಕೆ ಹೋದ್ರೆ ಅದರಿಂದ ಜನರಿಗೆ ನೆಮ್ಮದಿ ಸಿಗುತ್ತಾ? ಸಂವಿಧಾನ ಇದೆ, ಕೋರ್ಟ್ ಇದೆ ಬನ್ನಿ ಸಾಕ್ಷಿಯಿಟ್ಟು ಮಾತಾಡಿ ಎಂದರು.
ನಾವು ಈ ಹಿಂದೆ ಪಿಎಸ್ಐ ಹಗರಣದಲ್ಲಿ ಸಾಕ್ಷಿ ಇಟ್ಟು ಮಾತಾಡಿಲ್ಲವೇ? ಕೆಂಪಣ್ಣನವರು ನಮಗೆ ಬಿಲ್ ವಿಳಂಬ ಆಗ್ತಿದೆ ಎಂದಷ್ಟೇ ಹೇಳಿದ್ದರು. ಆದರೆ ಬಿಜೆಪಿಯವರು ಸುಮ್ಮನೆ ಏನೇನೋ ಮಾತಾಡ್ತಾರೆ ಎಂದು ಹೇಳಿದರು.
ಫ್ಲೈಯಿಂಗ್ ಕಿಸ್ ವಿಚಾರ: ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ, ರಾಹುಲ್ ಗಾಂಧಿ ಯಾರಿಗೂ ಫ್ಲೈಯಿಂಗ್ ಕಿಸ್ ಕೊಟ್ಟಿಲ್ಲ. ಮಾತಾಡೋದು ಕೇಳಿಸ್ತಿಲ್ಲ ಅಂತಾ ರಾಹುಲ್ ಗಾಂಧಿ ಕೇಳಿದ್ದಾರೆ. ಆದರೆ ರಾಹುಲ್ ಗಾಂಧಿ ಏನ್ಮಾಡಿದ್ರೂ ಬಿಜೆಪಿಯವರು ವಿವಾದ ಸೃಷ್ಟಿ ಮಾಡ್ತಾರೆ. ಈ ಸಿಟ್ಟು ಮಣಿಪುರ್ ಗ್ಯಾಂಗ್ ರೇಪ್ ಆದಾಗ ಎಲ್ಲಿ ಹೋಗಿತ್ತು?. ಬಿಜೆಪಿ ಎಂಪಿ ವಿರುದ್ಧ ಕ್ರೀಡಾಪಟುಗಳು ಆರೋಪ ಮಾಡಿದಾಗ ಸಿಟ್ಟು ಬಂದಿಲ್ವಾ?. ಒಬ್ಬ ಸಚಿವ ಏಕಪತ್ನಿವೃತಸ್ಥ ಅಂತಾ ಹೇಳ್ತಾರೆ, ಆಗ ಸಿಟ್ಟು ಬಂದಿಲ್ವಾ? ಬಿಜೆಪಿಯವರು ನೆಹರು ಅವರಿಂದ ರಾಹುಲ್ ಗಾಂಧಿಯವರೆಗೆ ಬರೀ ಬ್ಲೇಮ್ ಮಾಡಿಕೊಂಡು ಬರ್ತಿದ್ದಾರೆ. ಮಣಿಪುರ ಪದ ಬಳಕೆ ಮಾಡೋದಕ್ಕೆ ಪ್ರಧಾನಿಗೆ 90 ದಿವಸ ಬೇಕಿತ್ತಾ ಎಂದರು.
ಕಲುಷಿತ ನೀರು: ಕಲುಷಿತ ನೀರು ಸೇವಿಸಿ ಚಿತ್ರದುರ್ಗದಲ್ಲಿ ಜನರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಳ್ಳಾರಿ, ರಾಯಚೂರಿನಲ್ಲಿ ಕಲುಷಿತ ನೀರಿನ ಒಂದೊಂದು ಪ್ರಕರಣಗಳು ನಡೆದಿವೆ. ರಾಯಚೂರು ಕೇಸ್‌ಗೆ ಸಂಬಂಧಿಸಿದಂತೆ ಒಂದು ತಂಡ ರಚನೆ ಮಾಡಿದ್ದೇವೆ. ಕೆಲವು ಸಂದರ್ಭಗಳಲ್ಲಿ ನಮ್ಮ ಲೋಪದೋಷಗಳು ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರ ಲೋಪದೋಷಗಳೂ ಇವೆ. ಪೈಪ್ ಒಡೆದು ಚರಂಡಿ ನೀರು ಕುಡಿಯುವ ನೀರಿಗೆ ಮಿಕ್ಸ್ ಆಗಿ ಪ್ರಕರಣಗಳು ಆಗುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಕುಡಿಯುವ ನೀರು, ಆಒ ಪ್ಲಾಂಟ್ಗಾಗಿ ವಾಟರ್ ಅಡಿಟ್ ಕಮಿಟಿ ರಚನೆ ಮಾಡಿದ್ದೇವೆ. ಸೆಪ್ಟೆಂಬರ್ನಲ್ಲಿ ವಾಟರ್ ಆಡಿಟ್ ಕಮಿಟಿ ಪರಿಶೀಲನೆ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಕಮಿಷನ್ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ