ಕಲಬುರಗಿ: ಇದು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಜನ್ಮತಾಳಿದ ಮಂಡಳಿ. ಆದರೀಗ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಮಂಡಳಿಗೆ ಸಾರಥಿಯೇ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕವಾಗದ ಕಾರಣ ಕಳೆದೊಂದು ವರ್ಷದಿಂದ ಅಭಿವೃದ್ದಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಳ್ಳುತ್ತಿವೆ. ಬಂದಿರುವ ಅನುದಾನ ಕೂಡ ವಾಪಸ್ ಹೋಗುವ ಆತಂಕ ಎದುರಾಗಿದೆ.
ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆಯುತ್ತಿದ್ದರೂ, ಇದುವರೆಗೆ ಕೆಕೆಆರ್ಡಿಬಿಗೆ ಅಧ್ಯಕ್ಷರನ್ನ ನೇಮಕ ಮಾಡಿಲ್ಲ. ಇದರಿಂದ ಆರು ಜಿಲ್ಲೆಗಳಲ್ಲಿ ಮಂಡಳಿ ಅಡಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಾಮಗಾರಿಗಳ ರೂಪುರೇಷೆಗಳನ್ನು ತಯಾರು ಮಾಡಲು, ಅವುಗಳನ್ನು ಅನುಷ್ಠಾನಕ್ಕೆ ತರಲು ಸಾರಥಿ ಇಲ್ಲದೇ ನನೆಗುದಿಗೆ ಬಿದ್ದಿವೆ. ವರ್ಷಕ್ಕೆ ಕನಿಷ್ಠ ಮೂರ್ನಾಲ್ಕು ಬಾರಿಯಾದರೂ ಮಂಡಳಿಯ ಸಭೆ ಕರೆಯಬೇಕಿ ಎಂಬ ನಿಯಮ ಇದೆ. ಆದರೂ ಸದ್ಯ ಒಂದು ಸಭೆ ನಡೆಸಿಲ್ಲದಿರುವುದು ಈ ಭಾಗದ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ 2014 ರಿಂದ ಇಲ್ಲಿವರೆಗೆ 5,300 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದ್ರೆ ಸರ್ಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೇವಲ 3,300 ಕೋಟಿ ರೂ. ಅನುದಾನವನ್ನು ಮಾತ್ರ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಉಳಿದ ಅನುದಾನ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾಗದೇ ಉಳಿದಿದ್ದು, ಅನುದಾನ ವಾಪಸ್ ಹೋಗುವ ಆತಂಕ ಎದುರಾಗಿದೆ ಅಂತಾರೇ ಹೋರಾಟಗಾರಾದ ಲಕ್ಷ್ಮಣ ದಸ್ತಿ..
ಸೆಪ್ಟೆಂಬರ್ 17ರಂದು ಕಲಬುರಗಿಗೆ ಬಂದು ಹೈದರಾಬಾದ್ - ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ತೆರಳಿದ ಸಿಎಂ ಯಡಿಯೂರಪ್ಪ, ನಿಜವಾಗಿ ಕಲ್ಯಾಣ ಕರ್ನಾಟಕ ಮಾಡಲು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಇಂದು ವ್ಯಾಪಕವಾಗಿ ಕೇಳಿಬರುತ್ತಿದೆ. ಇನ್ನಾದರೂ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಅನ್ನೋದು ಕಲ್ಯಾಣ ಕರ್ನಾಟಕ ಭಾಗದ ಜನರ ಆಶಯ.