ಕಲಬುರಗಿ: ತನ್ನ ಅಂಗಡಿ ಮುಂದಿನ ಮತ್ತೊಂದು ಅಂಗಡಿ ತೆರವುಗೊಳಿಸಲು ನಿರಾಕರಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಊರಿನ ಗೌಡನೋರ್ವ ತಾಯಿ- ಮಗನನ್ನು ಸಾರ್ವಜನಿಕವಾಗಿ ಥಳಿಸಿದ ಘಟನೆ ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಅಂಬವ್ವ ಹಾಗೂ ಅವರ ಮಗ ರಾಜಕುಮಾರ್ ಎಂಬುವವರ ಮೇಲೆ ಇದೇ ಗ್ರಾಮದ ಮಲ್ಲಣ್ಣಗೌಡ ಎಂಬಾತ ನಡು ರಸ್ತೆಯಲ್ಲಿ ಥಳಿಸಿದ್ದಾನೆ. 'ಕಾಲು ಮುಗಿತೆವೇ ಬಿಡಿ' ಥಳಿತಕ್ಕೆ ಒಳಗಾಗುತ್ತಿರುವವರು ದಯನೀಯವಾಗಿ ಕೇಳಿಕೊಳ್ಳುತ್ತಿರುವ ಸಂಭಾಷಣೆ ವಿಡಿಯೋದಲ್ಲಿದೆ.
ಘಟನೆ ಹಿನ್ನಲೆ..
ಗ್ರಾಮದ ಬಳಿ ಇರುವ ಹೈವೆ ರಸ್ತೆಯಲ್ಲಿ ಧರ್ಮಣ್ಣಗೌಡ ಹಾಗೂ ಮಲ್ಲಣ್ಣಗೌಡ ಎಂಬುವರಿಗೆ ಸೇರಿದ ಮೂರು ಅಂಗಡಿಗಳಿವೆ. ಇದರಲ್ಲಿ ಒಂದನ್ನು ಬಾಡಿಗೆ ಪಡೆದು ಅಂಬವ್ವ ಕುಟುಂಬಸ್ಥರು ಹೋಟೆಲ್ ನಡೆಸುತ್ತಿದ್ದರು. ಆದರೆ, ಕೇಲ ದಿನಗಳ ಹಿಂದೆ ಮಾಲೀಕರು ಅಂಗಡಿ ಖಾಲಿ ಮಾಡಿಸಿದ್ದರು. ಅಂಬವ್ವ ಮಾಲೀಕನ ವಿರುದ್ಧ ತಿರುಗಿ ಬಿದ್ದು, ಅವರು ಅಂಗಡಿಯ ಮುಂದೆ ತಾನೂ ಖಾಲಿ ಜಾಗದಲ್ಲಿ ಶೇಡ್ ಹಾಕಿ ಹೊಟೇಲ್ ನಡೆಸುತ್ತಿದ್ದರು. ತನ್ನ ಸ್ವಂತ ಹೋಟೆಲ್ ಮುಂದೆ ಮತ್ತೊಂದು ಹೋಟೆಲ್ ನಿರ್ಮಿಸಿದಕ್ಕೆ ರೊಚ್ಚಿಗೆದ್ದ ಮಾಲೀಕ, ಹೊಟೇಲ್ ತೆರುವಗೊಳಿಸುವಂತೆ ಸೂಚಿಸಿದ. ತೆರವು ಮಾಡದ ಹಿನ್ನೆಲೆಯಲ್ಲಿ ತಾಯಿ- ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ.
ಹೋಟೆಲ್ ಖಾಲಿ ಮಾಡುವಂತೆ ಹಲವು ಬಾರಿ ಹೇಳಿದ್ದರೂ ಅಂಬ್ಬವ ಖಾಲಿ ಮಾಡಿರಲಿಲ್ಲ. ಇದೇ ಕಾರಣಕ್ಕೆ ಭಾನುವಾರ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ಇಬ್ಬರ ಮಧ್ಯೆದ ಹೊಡೆದಾಟದ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿವೆ. ಗಲಾಟೆಯಲ್ಲಿ ಪರಸ್ಪರಿಗೆ ಗಾಯಗಳಾಗಿವೆ. ಗಾಯಾಳುಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪರಸ್ಪರರು ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದಾರೆ.