ಕಲಬುರಗಿ: ಸಂಸದ ಡಾ.ಉಮೇಶ್ ಜಾಧವ್ ಅವರು ತಮಗೆ ಮೀಸಲಾತಿ ನೀಡಿರುವುದು ಕೃಷರಾಜ ಒಡೆಯರು ಎಂಬಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ದಲಿತ ಮುಖಂಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗುರುಶಾಂತ ಪಟ್ಟೆದಾರ್ ವಿರೋಧಿಸಿದ್ದು, ಕೂಡಲೇ ಉಮೇಶ್ ಜಾಧವ್ ಅವರು ಬಹಿರಂಗ ಕ್ಷಮೆ ಯಾಚಿಸಿ, ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ನಗರದ ನಿಲಾಂಬಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮೀಸಲು ಕುರಿತು ಉಮೇಶ್ ಜಾಧವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಮೀಸಲಾತಿ ಆಧಾರದ ಮೇಲೆಯೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದಾರೆ. ಈಗ ನಾವು ದಲಿತರಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಸಂವಿಧಾನದ ಅನುಗುಣವಾಗಿ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರ್ಪಡೆ ಮಾಡಿದ್ದು ದೇವರಾಜ್ ಅರಸು. ಆದರೆ, ಡಾ.ಅಂಬೇಡ್ಕರ್ ಅವರು ಸಂವಿಧಾನ ರಚನೆಗೂ ಮುನ್ನವೆ ಕೃಷರಾಜ ಒಡೆಯರು ಬಂಜಾರ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿಕೊಟ್ಟಿದ್ದಾರೆ ಎನ್ನುವ ಮೂಲಕ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಡಲೆ ಉಮೇಶ್ ಜಾಧವ್ ಅವರು ಬಹಿರಂಗ ಕ್ಷಮೆ ಯಾಚಿಸಿ, ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.