ಸೇಡಂ: ಬೆಳಗಿನ ವರದಿಯಲ್ಲಿ ಗ್ರಾಮೀಣ ಭಾಗದ 11 ಜನರಲ್ಲಿ ಕೊರೊನಾ ದೃಢವಾದ ಬೆನ್ನಲ್ಲೇ ಈಗ ನಗರದ ಮತ್ತಿಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದ ಔರಂಗಾಬಾದ್ನಿಂದ ಹಿಂದಿರುಗಿದ್ದ ಸೇಡಂ ಪಟ್ಟಣದ ಮಿಸ್ಕಿನಪುರ ಸತ್ತಾರಿಯಾ ಕಾಲೋನಿಯ ಇಬ್ಬರನ್ನು ಕಾಳಗಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ನಂತರ ಮನೆಗೆ ಕಳುಹಿಸಿಕೊಡಲಾಗಿತ್ತು.
ಆದರೆ ಮನೆಗೆ ಬಂದ ನಂತರ ಅವರ ವೈದ್ಯಕೀಯ ವರದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇದರಿಂದ 54 ವರ್ಷ ಮತ್ತು 44 ವರ್ಷದ ಇಬ್ಬರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಂಕಿತರು ಕಾಳಗಿಯಿಂದ ಖಾಸಗಿ ವಾಹನದಲ್ಲಿ ಸೇಡಂಗೆ ಬಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ಓರ್ವನ ಮಗ ಬಳೆ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸೋಂಕಿತರ ಮನೆಗೆ ಪಿಎಸ್‌ಐ ಸುಶೀಲಕುಮಾರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ, ಟಾಸ್ಕ್ ಫೋರ್ಸ್ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಸೋಂಕಿತರು ವಾಸವಿದ್ದ ಪ್ರದೇಶದ 200 ಮೀಟರ್ ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗುತ್ತಿದೆ.