ಕಲಬುರಗಿ: ಮಗಳ ಮದುವೆಗಾಗಿ ಸಾಲ ಮಾಡಿ ತಂದಿದ್ದ 2 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದು, ಬಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ನಗರದ ಎನ್ಜಿಒ ಕಾಲೋನಿ ನಿವಾಸಿಯಾಗಿರುವ ಶಂಕರ್ ರಾವ್ ಕುಲಕರ್ಣಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಶಂಕರ್ ರಾವ್ ತಮ್ಮ ಮಗಳ ಮದುವೆಗಾಗಿ ಸಾಲ-ಸೋಲ ಮಾಡಿ ಒಡವೆ, ಬಟ್ಟೆ, ಪಾತ್ರೆಗಳನ್ನು ತಂದಿಟ್ಟಿದ್ದರು. ಆದರೆ ತಡರಾತ್ರಿ ಮನೆಗೆ ನುಗ್ಗಿದ ಖದೀಮರು ಎಲ್ಲವನ್ನೂ ಕದ್ದು ಪರಾರಿಯಾಗಿದ್ದಾರೆ. ಇದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಇದೇ ಜ.03ಕ್ಕೆ ಶಂಕರ್ ರಾವ್ ಅವರ ಎರಡನೇ ಮಗಳು ಪ್ರಿಯಾ ಎಂಬುವರ ಮದುವೆ ನಿಶ್ಚಯ ಮಾಡಲಾಗಿತ್ತು. ಕಡು ಬಡತನವಿದ್ದರೂ ಸಹ ತಮ್ಮ ಮಗಳ ಮದುವೆಗೆ ಯಾವುದೇ ರೀತಿಯ ಕೊರತೆ ಆಗದಂತೆ ಸಾಲ ಮಾಡಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ಇದೀಗ ಮಗಳ ಮದುವೆಗೆ ತಂದಿಟ್ಟ ವಸ್ತುಗಳು ಕಳ್ಳತನವಾದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.
ಶಂಕರ್ ರಾವ್ ತನ್ನ ಕುಟುಂಬದೊಂದಿಗೆ ಎನ್ಜಿಒ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಚಿಕ್ಕದಾದ ಬಾಡಿಗೆ ಮನೆಯಲ್ಲಿ ವಾಸವಿದ್ದ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲೇ ಮದುವೆ ಸಾಮಾನುಗಳು ಇಟ್ಟರೆ ಮೂರು ಜನ ಮಕ್ಕಳು, ಗಂಡ-ಹೆಂಡತಿ, ಸಂಬಂಧಿಕರು ಬಂದರೆ ಕುಳಿತುಕೊಳ್ಳವುದಕ್ಕೆ ಜಾಗ ಸಾಕಾಗೋದಿಲ್ಲ ಎಂದು ಪರಿಚಯಸ್ಥರ ಮನೆಯ ಖಾಲಿ ರೂಮಿನಲ್ಲಿ ಮದುವೆಗೆ ಬೇಕಾದ ವಸ್ತುಗಳನ್ನಿಟ್ಟು ಬೀಗ ಹಾಕಿದ್ದರು. ಆದರೆ ನಿನ್ನೆ ತಡರಾತ್ರಿ ಖದೀಮರು ಎಲ್ಲಾ ವಸ್ತುಗಳನ್ನು ದೋಚಿದ್ದಾರೆ.
ಶಂಕರ್ ರಾವ್ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದು, ಇವರ ಪತ್ನಿ ಬೇರೆಯವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ಮೊದಲನೇ ಮಗಳ ಮದುವೆ ಆಗಿದ್ದು, ಇದೀಗ ಎರಡನೆ ಮಗಳ ಮದುವೆಗೆ ಕುಟುಂಬ ಸಂಬಂಧಿಕರ ನೆರವಿನಿಂದ, ಸಾಲ ಮಾಡಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಇದೇ ವೇಳೆ ಈ ಘಟನೆ ನಡೆದಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಲು ಜಾಲ ಬೀಸಿದ್ದಾರೆ.