ಕಲಬುರಗಿ: ಕೊರೊನಾ ಸೋಂಕು ತಗುಲಿದ ಪೊಲೀಸ್ ಕಾನ್ಸ್ಟೇಬಲ್ ಅವರನ್ನು ಆಸ್ಪತ್ರೆ ಬದಲಾಗಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಈ ಮಧ್ಯೆ, ಅಲ್ಲಿನ ದುಃಸ್ಥಿತಿ ಕಂಡ ಕಾನ್ಸ್ಟೇಬಲ್ ತಮ್ಮ ಮೊಬೈಲ್ನಲ್ಲಿ ಆ ದೃಶ್ಯಗಳನ್ನ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಫರತಾಬಾದ್ ಠಾಣೆಯ ಕಾನ್ಸ್ಟೇಬಲ್ರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯದಿಂದ ಇವರನ್ನು ಕ್ವಾರಂಟೈನ್ ಕೇಂದ್ರವೊಂದಕ್ಕೆ ಕರೆದೊಯ್ದು ಬಿಟ್ಟಿದ್ದ. ಆದರೆ, ಅಲ್ಲಿನ ದುಃಸ್ಥಿತಿ ಊಟದ ಅವ್ಯವಸ್ಥೆಗೆ ಕಾನ್ಸ್ಟೇಬಲ್ ಬಾರಿ ಅಸಮಾಧಾನ ಹೊರ ಹಾಕಿದ್ದಾರೆ.
ಸ್ವಚ್ಛತೆ ಅನ್ನೋದು ಇಲ್ಲಿ ಇಲ್ಲವೇ ಇಲ್ಲ, ನೊಣ ಬಿದ್ದಿರುವ ಊಟ ತಂದು ಕೊಟ್ಟಿದ್ದಾರೆ. ಇಲ್ಲಿ ಕೊರೊನಾ ಮುಕ್ತವಾಗಿ ಹೊರಗೆ ಬರುವ ಬದಲಾಗಿ ಇಲ್ಲದ ರೋಗಗಳನ್ನು ಅಂಟಿಸಿಕೊಂಡು ಜೀವಂತ ಶವವಾಗುವ ಸ್ಥಿತಿ ಇದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರ ಅಸಮಾಧಾನವನ್ನ ವಾಟ್ಸ್ಆ್ಯಪ್ ಆಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಜನರ ರಕ್ಷಣೆಗಾಗಿ ಶ್ರಮಿಸಿದ ನಮಗೆ ಹೀಗಾದರೆ ಜನ ಸಾಮಾನ್ಯರ ಸ್ಥಿತಿ ಹೇಗಿರಬಾರದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಎಲ್ಲ ಪೊಲೀಸ್ ಸಿಬ್ಬಂದಿ ಮೊದಲು ನಿಮ್ಮ ನಿಮ್ಮ ರಕ್ಷಣೆ ಮಾಡಿಕೊಳ್ಳಿ, ಜೀವ ಇದ್ದರೆ ಜೀವನ ಹೇಗಾದರೂ ಮಾಡಬಹುದು. ಸರ್ಕಾರಿ ನೌಕರಿ ಎಂದು ಕಟ್ಟು ಬಿಳಬೇಡಿ ಎಂದು ತಮ್ಮ ನೋವು ಹೊರ ಹಾಕಿದ್ದಾರೆ.