ಸೇಡಂ: ಮತದಾರರಿಗೆ ಸೀರೆ, ಪಂಚೆ ಹಂಚಲು ಮುಂದಾದಾಗ ಗ್ರಾಮಸ್ಥರು ದಾಳಿ ನಡೆಸಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಮೋತಕಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪೂರ ತಾಂಡಾದಲ್ಲಿ ನಡೆದಿದೆ.
ಗ್ರಾಮದ ಸ್ವತಂತ್ರ ಅಭ್ಯರ್ಥಿ ಬಲರಾಮ ತೋಟ್ಯಾನಾಯಕ ಎಂಬಾತ ತಾಂಡಾದ ಮನೆ ಮನೆಗೂ ತೆರಳಿ ಸೀರೆ ಮತ್ತು ಪಂಚೆ ಹಾಗೂ ಶರ್ಟ್ಗಳನ್ನು ಹಂಚಿ ಮತ ನೀಡುವಂತೆ ಕೋರುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸ್ಥಳೀಯರು ದಾಳಿ ನಡೆಸಿ, ಸೀರೆಗಳನ್ನು ಮುಧೋಳ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತದಾರರಿಗೆ ಹಂಚಲು ತಂದಿದ್ದ 15 ಸಾವಿರ ರೂ. ಮೌಲ್ಯದ 35 ಸೀರೆ, 35 ಧೋತಿ ಪಂಚೆ ಹಾಗೂ ಶರ್ಟ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಆರೋಪಿ ಪರಾರಿಯಾಗಿದ್ದಾನೆ ಎಂದು ಮುಧೋಳ ಪಿಐ ಆನಂದರಾವ್ ತಿಳಿಸಿದ್ದಾರೆ.