ಕಲಬುರಗಿ: ಕೆಂಪು ಬಾವುಟ ಹೋರಾಟಗಾರ, ರೈತ ಮತ್ತು ಕಾರ್ಮಿಕರ ಪರವಾಗಿ ನಡೆಯುವ ಪ್ರತಿಭಟನೆಯ ಮುಂಚೂಣಿಯಲ್ಲಿ ಇರುತ್ತಿದ್ದ ಮಾರುತಿ ಮಾನ್ಪಡೆ ಮಣ್ಣಲಿ ಲೀನರಾದರು. ಇನ್ನೂ ಏನಿದ್ರು ಅವರು ಕೇವಲ ನೆನಪು ಮಾತ್ರ.
ನಾಲ್ಕು ದಶಕಗಳ ಕಾಲ ಜನಪರ ಹೋರಾಟದ ಮೂಲಕ ದಣಿವರಿಯದ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದ ಮಾರುತಿ ಮಾನ್ಪಡೆ ಕೊರೊನಾ ಸೋಂಕಿನಿಂದ ನಿಮೋನಿಯಾದಿಂದ ಬಳಲಿ ನಿನ್ನೆ ಸೋಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮವಾದ ಕಮಲಾಪುರ ತಾಲೂಕಿನ ಅಂಬಲಗಿಯಲ್ಲಿ ಕೊವೀಡ್ ನಿಯಮಾವಳಿ ಪ್ರಕಾರ ನಡೆಯಿತು.
ಷೋಷಿತ ವರ್ಗಕ್ಕೆ, ಧ್ವನಿ ಇಲ್ಲದ ಕಾರ್ಮಿಕರ ಪರವಾಗಿ ಧ್ವನಿಯಾಗಿ ನಿಲ್ಲುತ್ತಿದ್ದ ಮಾನ್ಪಡೆ ಅವರ ಅಗಲಿಕೆ ಕಲ್ಯಾಣ ಕರ್ನಾಟಕ ಮಾತ್ರವಲ್ಲ ಇಡೀ ರಾಜ್ಯಕ್ಕೆ ತುಂಬಲಾಗದ ನಷ್ಟವಾಗಿದೆ. ಅವರ ಅಗಲಿಕೆಯೊಂದಿಗೆ ರೈತ, ದಲಿತ, ಕಾರ್ಮಿಕ ವರ್ಗದ ಗಟ್ಟಿಧ್ವನಿಯೊಂದು ಲೀನವಾದಂತಾಗಿದೆ.
ಸರ್ಕಾರಿ ನೌಕರಿ ಧಿಕ್ಕರಿಸಿ ಹೋರಾಟದ ಹಾದಿ: ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮದಲ್ಲಿ ಜೂನ್ 01, 1956 ರಲ್ಲಿ ಜಮಿಸಿದ ಮಾನ್ಪಡೆ, ವಿದ್ಯಾರ್ಥಿ ದಿಸೆಯಲ್ಲಿಯೇ ಹೋರಾಟದ ಮೂಲಕ ಗಮನ ಸೆಳೆದಿದ್ದರು. ಸರ್ಕಾರಿ ನೌಕರಿ ಸಿಕ್ಕರೂ ಅದನ್ನು ತೊರೆದು ಜನರಪರ ಕೆಲಸಗಳನ್ನು ಮುಂದುವರೆಸಿದ್ದರು. 1981-82 ರಲ್ಲಿ ಜನಪರ ಹೋರಾಟಕ್ಕೆ ಧುಮುಕಿ ರೈತ ಚಳುವಳಿಯ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದ ಅವರು, ನಾಡಿನ ತುಂಬೆಲ್ಲ ರೈತ ಚಳುವಳಿಯನ್ನು ಪ್ರಖರಗೊಳಿಸಿದ್ದವರಲ್ಲಿ ಪ್ರಮುಖರಾಗಿದ್ದರು. ಸಿಪಿಐಎಂ ಪಕ್ಷದ ರಾಜ್ಯಕಾರ್ಯದರ್ಶಿಯಾಗಿ, ಕಮಲಾಪುರ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರದಲ್ಲಿ ಕೆಲವು ಬಾರಿ ಕಮಲಾಪುರ ಹಾಗೂ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿಯಾಗಿ, ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆ ಕಣ್ಣಕ್ಕಿಳಿದಿದ್ದರು. ಗೆಲ್ಲಲಿ, ಬಿಡಲಿ ತಮ್ಮ ಜನಪರ ಕಾರ್ಯಗಳನ್ನು ಮುಂದುವರಿಸಿಕೊಂಡೇ ಸಾಗಿದ್ದರು.
ಸೆಪ್ಟೆಂಬರ ತಿಂಗಳಲ್ಲಿ ನಡೆದ ಕರ್ನಾಟಕ ಬಂದ್ ಅವರ ಕೊನೆಯ ಹೋರಾಟವಾಗಿತ್ತು. ನಾಲ್ಕು ದಶಗಳ ಕಾಲ ರೈತ ಹಾಗೂ ಕಾರ್ಮಿಕರ ಪರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಯಾವುದೇ ಮುಲಾಜಿಲ್ಲದೆ ಹೋರಾಟ ನಡೆಸಿದ ಮಾನ್ಪಡೆ ಹೋರಾಟದ ಮೂಲಕವೇ ಇದೀಗ ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ಅಗಲಿಕೆ ಅಭಿಮಾನಿ ಬಳಗ ಅರಗಿಸಿಕೊಳ್ಳಲು ಆಗದೆ ನೆನೆದು ಕಣ್ಣೀರಿಡುತ್ತಿದ್ದಾರೆ.