ಕಲಬುರಗಿ: ಭೀಮಾ ನದಿ ಪ್ರವಾಹದಿಂದ ನದಿಪಾತ್ರದ ಜನರು ಸಂಕಷ್ಟ ಎದುರಿಸುತ್ತಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರವಾಹ ಸಂತ್ರಸ್ತರ ಹಸಿವು ನೀಗಿಸಲು ಫರತಾಬಾದ ಗ್ರಾಮಸ್ಥರು ಮುಂದಾಗಿದ್ದಾರೆ.
ಪ್ರವಾಹದಿಂದಾಗಿ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇದರಿಂದಾಗಿ ಪ್ರವಾಹ ಸಂತ್ರಸ್ತರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಜಿಲ್ಲಾಡಳಿತ ಆಯಾ ಗ್ರಾಮದಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ನೆರೆ ಸಂತ್ರಸ್ತರ ನೆರವಿಗೆ ನಿಂತಿದೆ. ಆದ್ರೆ, ಹೆಚ್ಚಿನ ಪ್ರವಾಹ ಸಂತ್ರಸ್ತರು ಹಸುಗೂಸುಗಳನ್ನು ಎತ್ತಿಕೊಂಡು ರಸ್ತೆಯಲ್ಲಿ ಗೋಳಾಡುತ್ತಿರುವ ದೃಶ್ಯಗಳು ಮನಕಲಕುವಂತಿದೆ. ಇಂತಹ ಪರಿಸ್ಥಿತಿಯನ್ನು ಮನಗಂಡ ಕಲಬುರಗಿ ಸಮೀಪದ ಫರತಾಬಾದ ಗ್ರಾಮಸ್ಥರು ಸಂತ್ರಸ್ತರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೋನಹಿಪ್ಪರಗಿ ಸೇರಿದಂತೆ ಪ್ರವಾಹಕ್ಕೆ ತುತ್ತಾದ ಹಲವು ಗ್ರಾಮಗಳಿಗೆ ವಾಹದಲ್ಲಿ ಸಂಚರಿಸಿ ಆಹಾರ ಒದಗಿಸುವ ಮೂಲಕ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ಜೊತೆಗೆ ಬೇರೆ ರಾಜ್ಯಗಳಿಂದ ಬಂದಂತಹ ಲಾರಿ, ವಾಹನ ಚಾಲಕರಿಗೂ ಸಹ ಆಹಾರ ವಿತರಿಸುತ್ತಿದ್ದಾರೆ. ಇದರಿಂದ ಮನೆ ಕಳೆದುಕೊಂಡು ಕಂಗಾಲಾದ ಸಂತ್ರಸ್ತರು ಉಪವಾಸವಿರುವುದು ತಪ್ಪಿದೆ.
ಈ ಬಾರಿ ಅತಿವೃಷ್ಟಿಯಿಂದಾಗಿ ನಮ್ಮ ಜಿಲ್ಲೆಯ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲೆಡೆ ನೀರು ಆವರಿಸಿರುವುದರಿಂದ ಜನರಿಗೆ ಊಟ ನೀರು ಏನೂ ಸಿಗುತ್ತಿಲ್ಲ. ಹಾಗಾಗಿ ಗ್ರಾಮಸ್ಥರೆಲ್ಲ ಒಂದಾಗಿ, ಪ್ರವಾಹಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವವರಿಗೆ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ ಎಂದು ಗ್ರಾಮದ ಮುಖಂಡರಾದ ಚನ್ನಬಸಪ್ಪ ಸಜ್ಜನ್ ತಿಳಿಸಿದ್ದಾರೆ.