ಕಲಬುರಗಿ : ಒಳಚರಂಡಿ ವಿಚಾರಕ್ಕೆ ಎರಡು ಪ್ರತಿಷ್ಠಿತ ಕುಟುಂಬಗಳ ನಡುವೆ ಗಲಾಟೆ ನಡೆದು, ಓರ್ವ ಯುವಕನ ಕೊಲೆ ಹಾಗೂ ಆರು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣ ಸಂಬಂಧ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಚಿತ್ತಾಪುರ ತಾಲೂಕಿನ ಮುಡಬೂಳ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿತ್ತು. ಮನೆ ಮುಂದೆ ಹರಿದ ಒಳ ಚರಂಡಿ ವಿಷಯವಾಗಿ ಬೆಳಗ್ಗೆ ಸಂಗಾವಿ ಕುಟುಂಬ ಹಾಗೂ ಸಣ್ಣೂರಕರ್ ಕುಟುಂಬದ ನಡುವೆ ವಾಗ್ವಾದ ನಡೆದಿತ್ತು.
ಅಂದು ರಾತ್ರಿ ಮತ್ತೆ ಆರೇಳು ಜನ ಸೇರಿ ಸಣ್ಣುರಕರ್ ಮನೆಗೆ ತೆರಳಿದ ಸಂಗಾವಿ ಕುಟುಂಬಸ್ಥರ ಮೇಲೆ ಸಣ್ಣೂರಕರ್ ಕುಟುಂಬಸ್ಥರು ಕಟ್ಟಿಗೆ, ಕಲ್ಲು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ವಿಶ್ವನಾಥ ಸಂಗಾವಿ ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಗೊಂಡ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಚರಂಡಿ ಗಲಭೆ: ಮನೆಗೆ ನುಗ್ಗಿ ಥಳಿಸಿದ ಗುಂಪು.. ಯುವಕನ ಕೊಲೆ, ಆರು ಜನರ ಸ್ಥಿತಿ ಗಂಭೀರ!
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶಿವಮೂದ್ರಪ್ಪ ಸಣ್ಣೂರಕರ್ (60), ಇವರ ಪುತ್ರ ವಿಶ್ವನಾಥ್ ಸಣ್ಣೂರಕರ್ (32), ಭಾಗಿನಾಥ ಸಣ್ಣೂರಕರ್ (25), ಭದ್ರಪ್ಪ ಸಿದ್ರಾಮಗೋಳ (35), ಅಪ್ಪಣ್ಣಾ ಗೋಳೆದ (25), ರಾಮೂ ಸಣ್ಣೂರಕರ್ (45), ಉಮೇಶ ಸಣ್ಣೂರಕರ್ (55), ನಾಗರಾಜ ಸಣ್ಣೂರಕರ್ (26), ಧನರಾಜ ಸಣ್ಣೂರಕರ್ (24), ಬಸವರಾಜ ಸಣ್ಣೂರಕರ್ (20) ಎಂಬುವರು ಸೇರಿ ಒಟ್ಟು 17 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಮುಖ ಆರೋಪಿ ಶಿವಮೂದ್ರಪ್ಪ ಸೇರಿ 10 ಜನರನ್ನು ಈಗಾಗಲೇ ಬಂಧಿದ್ದಾರೆ. ಉಳಿದವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರಿ ಗುಂಡಿನ ಚಕಮಕಿ: 10 ಮಂದಿ ಬಂದೂಕುಧಾರಿಗಳನ್ನ ಕೊಂದ ಪೊಲೀಸರು