ಕಲಬುರಗಿ: ಶಿಕ್ಷಣದಲ್ಲಿ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವದರಿಂದ ಗುಣಾತ್ಮಕ ಶಿಕ್ಷಣ ನೀಡಬಹುದು ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಶರಣಬಸವಪ್ಪ ಅಪ್ಪ ಹೇಳಿದ್ದಾರೆ.
ಶರಣಬಸವ ವಿವಿ ಎಐಸಿಟಿಇಯಿಂದ ತಾಂತ್ರಿಕ ಕೋರ್ಸ್ಗಳಿಗೆ ಮಾನ್ಯತೆ ಪಡೆದ ಹಿನ್ನಲೆ, ವಿಶ್ವವಿದ್ಯಾಲಯದ ಆವರಣದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ. ಶರಣಬಸವಪ್ಪ ಅಪ್ಪಾ ಮತ್ತು ಮಾತೋಶ್ರೀ ದಾಕ್ಷಾಯಣಿ ಅವ್ವ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಪ್ರಾಧ್ಯಾಪಕ ವರ್ಗ ಕಠಿಣ ಶ್ರಮ ವಹಿಸುತ್ತಿದ್ದಾರೆ. ಇದರ ಫಲವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಗುಣಾತ್ಮಕ ಶಿಕ್ಷಣಕ್ಕೆ, ನಮ್ಮ ಸಂಸ್ಥೆ ಹೆಸರುವಾಸಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶರಣಬಸವ ವಿವಿ ಕುಲಪತಿ ಎನ್.ಎಸ್ ದೇವರಕಲ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಇದೇ ವೇಳೆ ಎಐಸಿಟಿಇ ಮಾನ್ಯತೆ ಪಡೆಯುವುದಕ್ಕಾಗಿ ಹಗಲಿರುಳು ಶ್ರಮಿಸಿದ ವಿಭಾಗದ ಮುಖ್ಯಸ್ಥರನ್ನು ಹಾಗೂ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.